ಚುನಾವಣಾ ಫಲಿತಾಂಶ ಪ್ರಕಟವಾದ 48 ಗಂಟೆಗಳೊಳಗೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಪ್ರಕಟಿಸಲಾಗುವುದು: ಜೈರಾಮ್ ರಮೇಶ್
"ಹೆಚ್ಚು ಸ್ಥಾನ ಗಳಿಸಿದ ಪಕ್ಷ ಪ್ರಧಾನಿ ಹುದ್ದೆಯ ಸಹಜ ಹಕ್ಕುದಾರ"
ಜೈರಾಮ್ ರಮೇಶ್ | PTI
ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟವು ನಿರ್ಣಾಯಕ ಬಹುಮತ ಪಡೆಯಲಿದ್ದು, ಫಲಿತಾಂಶ ಪ್ರಕಟವಾದ 48 ಗಂಟೆಗೂ ಮುಂಚೆಯೇ ಪ್ರಧಾನಿ ಅಭ್ಯರ್ಥಿ ಕುರಿತು ನಿರ್ಧಾರವಾಗಲಿದೆ ಎಂದು ಗುರುವಾರ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಮೈತ್ರಿಕೂಟದಲ್ಲಿ ಯಾವ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸುತ್ತದೊ, ಆ ಪಕ್ಷ ಪ್ರಧಾನಿ ಹುದ್ದೆಯ ಸಹಜ ಹಕ್ಕುದಾರನಾಗಿರುತ್ತದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ಕೊನೆಯ ದಿನವಾದ ಇಂದು PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಜೈರಾಮ್ ರಮೇಶ್, ಇಂಡಿಯಾ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 272ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನಾನುರಾಗಿ ಮೈತ್ರಿಕೂಟವಾದ ಇಂಡಿಯಾ ಜನಮತ ಪಡೆಯಲಿದ್ದು, ಕೆಲವು NDA ಮೈತ್ರಿಕೂಟದ ಪಕ್ಷಗಳೂ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅಂತಹ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೊ ಬೇಡವೊ ಎಂಬ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದೂ ಅವರು ಹೇಳಿದ್ದಾರೆ.
ಒಂದು ವೇಳೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೇನಾದರೂ ಇಂಡಿಯಾ ಮೈತ್ರಿಕೂಟದ ಬಾಗಿಲು ತೆರೆದಿದೆಯೆ ಎಂಬ ಪ್ರಶ್ನೆಗೆ, ನಿತೀಶ್ ಕುಮಾರ್ ತಮ್ಮ ಪಲ್ಟಿ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.