“ಇಸ್ರೇಲ್ ನಲ್ಲಿಯ ಸ್ಥಿತಿಯ ಮೇಲೆ ಪ್ರಧಾನಿ ಕಚೇರಿ ನಿಗಾಯಿರಿಸಿದೆ”
ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿಕೆ
ಮೀನಾಕ್ಷಿ ಲೇಖಿ | Photo: NDTV
ಹೊಸದಿಲ್ಲಿ : ಹಮಾಸ್ ದಾಳಿಯ ಬಳಿಕ ಇಸ್ರೇಲ್ ನಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯ ನಡುವೆಯೇ ರವಿವಾರ ಕೇಂದ್ರ ಸಹಾಯಕ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಸಚಿವೆ ಮೀನಾಕ್ಷಿ ಲೇಖಿ ಅವರು,ಪ್ರ ಧಾನಿ ಕಚೇರಿಯು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ಎಂದು ಭರವಸೆ ನೀಡಿದರು.
ಹಮಾಸ್ ನೊಂದಿಗೆ ಸಂಘರ್ಷಪೀಡಿತ ಇಸ್ರೇಲ್ ನಲ್ಲಿ ಹಲವಾರು ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ. ರಾತ್ರಿಯಿಡೀ ಹಲವಾರು ದೂರವಾಣಿ ಕರೆಗಳನ್ನು ತಾನು ಸ್ವೀಕರಿಸಿದ್ದು,ಪ್ರಧಾನಿ ಕಚೇರಿಯು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯಾಚರಿಸುತ್ತಿದೆ ಎಂದು ಹೇಳಿದ ಲೇಖಿ,‘ಅದು ಪರಿಸ್ಥಿತಿಯ ನೇರವಾದ ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಮತ್ತು ನಾವು ಕಾರ್ಯನಿರತರಾಗಿದ್ದೇವೆ. ಈ ಹಿಂದೆಯೂ ಆಂಧ್ರ ಪ್ರದೇಶದವರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಸಿಕ್ಕಿ ಹಾಕಿಕೊಂಡಿದ್ದರು. ಅದು ಆಪರೇಷನ್ ಗಂಗಾ ಅಥವಾ ವಂದೇ ಭಾರತ ಆಗಿರಲಿ, ನಾವು ಪ್ರತಿಯೊಬ್ಬರನ್ನೂ ವಾಪಸ್ ಕರೆತಂದಿದ್ದೇವೆ ’ ಎಂದರು. ಈ ನಡುವೆ ಬಿಜೆಪಿ ಸಂಸದ ರಾಜ್ಯವರ್ಧನ್ ಸಿಂಗ್ ರಾಠೋಡ್ ಅವರು, ಭಾರತ ಸರಕಾರವು ಪ್ರಸಕ್ತ ಬಿಕ್ಕಟಿನ ಸಂದರ್ಭದಲ್ಲಿ ಇಸ್ರೇಲನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದೆ ಎಂದು ಹೇಳಿದ್ದಾರೆ.