ಗಾಝಾದ ಮೇಲಿನ ಇಸ್ರೇಲ್ ವಾಯುದಾಳಿಗೆ ಪ್ರಿಯಾಂಕಾ ಗಾಂಧಿ ಖಂಡನೆ
►400ಕ್ಕೂ ಹೆಚ್ಚು ಜನರ ಹತ್ಯೆಯನ್ನು ನಿರ್ದಯ ಕೊಲೆ ಎಂದ ಕಾಂಗ್ರೆಸ್ ಸಂಸದೆ

ಪ್ರಿಯಾಂಕ ಗಾಂಧಿ
ಹೊಸದಿಲ್ಲಿ : ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಇಸ್ರೇಲ್ನ ಇತ್ತೀಚಿನ ವಾಯುದಾಳಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಗಳನ್ನು ನಿರ್ದಯ ಕೊಲೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“130 ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಅಮಾಯಕ ನಾಗರಿಕರನ್ನು ಇಸ್ರೇಲ್ ಸರ್ಕಾರವು ಕಠೋರವಾಗಿ ಹತ್ಯೆ ಮಾಡಿರುವುದು ಅವರಿಗೆ ಮಾನವೀಯತೆಯೇ ಇಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಪ್ರಿಯಾಂಕಾ ಗಾಂಧಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ. ಜನವರಿಯಲ್ಲಿ ಕದನ ವಿರಾಮ ಒಪ್ಪಂದ ಜಾರಿಗೆ ಬಂದ ನಂತರ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ವ್ಯಾಪಕ ವಾಯುದಾಳಿಯ ಸಂದರ್ಭದಲ್ಲಿ ಅವರ ಹೇಳಿಕೆಗಳು ಬಂದಿವೆ.
ಮಂಗಳವಾರ ನಡೆದ ಇಸ್ರೇಲ್ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 413 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ. 660 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅನೇಕ ಸಂತ್ರಸ್ತರು ನಾಶವಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆಯಿದೆ ಭಯವಿದೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.