ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೊಳಿಸುವಂತೆ ಪ್ರಿಯಾಂಕಾ ಗಾಂಧಿ ಆಗ್ರಹ
Photo: PTI
ಚೆನ್ನೈ: “ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಒದಗಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರವೇ ಜಾರಿಗೊಳಿಸಬೇಕು, ಅದಕ್ಕಾಗಿ ಮತ್ತಷ್ಟು ಸಮಯವನ್ನು ವ್ಯರ್ಥ ಮಾಡಬಾರದು” ಎಂದು ಶನಿವಾರ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಡಿಎಂಕೆ ಪಕ್ಷವು ಆಯೋಜಿಸಿದ್ದ ಮಹಿಳೆಯರ ಹಕ್ಕುಗಳ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
“ಮಹಿಳೆಯರು ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಅಸಾಧಾರಣ ಕ್ರೋಡೀಕೃತ ಶಕ್ತಿಯಾಗಲಿದ್ದಾರೆ ಎಂಬುದು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅರ್ಥವಾಗಲು ಪ್ರಾರಂಭವಾಗಿರುವುದರಿಂದ ಇಂದು ಮಹಿಳೆಯರ ಸಬಲೀಕರಣದ ಬಗ್ಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ” ಎಂದು ಅವರು ಹೇಳಿದ್ದಾರೆ.
“ಹೀಗಿದ್ದೂ ಅವರು ನಮ್ಮತ್ತ ಮತಗಳ ದುರಾಸೆಯಿಂದಲೇ ನೋಡುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನ್ನ ಸಹೋದರಿಯರ ಪರವಾಗಿ ನಾನು ಇದಕ್ಕಿಂತ ಹೆಚ್ಚಿನದನ್ನು ಆಗ್ರಹಿಸುತ್ತೇನೆ. ಮಹಿಳಾ ಮೀಸಲಾತಿ ಮಸೂದೆಯು ತಕ್ಷಣವೇ ಜಾರಿಯಾಗಬೇಕು ಎಂದು ನಾನು ಒತ್ತಾಯಿಸುತ್ತೇನೆ. ಭಾರತೀಯ ಮಹಿಳೆಯರಾದ ನಮಗೆ ಸಮಯವನ್ನು ವ್ಯರ್ಥ ಮಾಡಲು ಮತ್ತಷ್ಟು ಕಾಲಾವಕಾಶವಿಲ್ಲ. ರಾಜಕೀಯ ಪ್ರಕ್ರಿಯೆಯಲ್ಲಿ ನಾವು ಗಣನೆಗೊಳಗಾಗಬೇಕಿರುವುದು ನಮ್ಮ ಹಕ್ಕಾಗಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಮಹಿಳೆಯರ ಕೆಲಸ ಮೌಲ್ಯಮಾಪನ ಹಾಗೂ ಗೌರವಕ್ಕೊಳಗಾಗಬೇಕು ಎಂದು ಒತ್ತಾಯಿಸಿದ ಅವರು, ಸಾಮಾಜಿಕ, ಧಾರ್ಮಿಕ ಅಥವಾ ರಾಜಕೀಯ ವ್ಯವಸ್ಥೆಯಿಂದ ನಿರಾಕರಿಸಲ್ಪಟ್ಟಾಗ ಅದು ನಮ್ಮ ಮೇಲಿನ ದಬ್ಬಾಳಿಕೆಯಾಗಲಿದ್ದು, ಅದರ ವಿರುದ್ಧ ನಾವು ಸಂಘರ್ಷಕ್ಕಿಳಿಯವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಕಳೆದ ತಿಂಗಳು ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ.