ಪಿಎಂಎಲ್ಎ ಪ್ರಕರಣದಲ್ಲಿ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿಯನ್ನು ಹೆಸರಿಸಿದ ಈಡಿ
Photo- PTI
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈ.ಡಿ.)ವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯಡಿ ಎನ್ನಾರೈ ಉದ್ಯಮಿ ಸಿ.ಸಿ.ಥಂಪಿ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಹೆಸರನ್ನು ಉಲ್ಲೇಖಿಸಿದೆ. ಈ.ಡಿ. ಪ್ರಕರಣಕ್ಕೆ ಸಂಬಂಧಿಸಿದ ಹಿಂದಿನ ದೋಷಾರೋಪ ಪಟ್ಟಿಗಳಲ್ಲಿ ಪ್ರಿಯಾಂಕಾರ ಪತಿ ರಾಬರ್ಟ್ ವಾದ್ರಾರನ್ನು ಹೆಸರಿಸಿತ್ತು.
ಜನವರಿ,2020ರಲ್ಲಿ ಈ.ಡಿ.ಯಿಂದ ಬಂಧಿಸಲ್ಪಟ್ಟ ಥಂಪಿ ತನಗೆ ವಾದ್ರಾ 10 ವರ್ಷಕ್ಕೂ ಅಧಿಕ ಸಮಯದಿಂದ ಗೊತ್ತು ಮತ್ತು ವಾದ್ರಾ ಯುಎಇಗೆ ಪ್ರವಾಸ ಕೈಗೊಂಡಿದ್ದಾಗ ಮತ್ತು ದಿಲ್ಲಿಯಲ್ಲಿ ತಾವಿಬ್ಬರೂ ಹಲವಾರು ಸಾರಿ ಭೇಟಿಯಾಗಿದ್ದೆವು ಎಂದು ತನಿಖಾ ಸಂಸ್ಥೆಗೆ ತಿಳಿಸಿದ್ದರು.
ಥಂಪಿ 2005-2008ರ ನಡುವಿನ ಅವಧಿಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಎಚ್.ಎಲ್.ಪಹ್ವಾ ಮೂಲಕ ಹರ್ಯಾಣದ ಫರೀದಾಬಾದ್ನ ಅಮೀರ್ಪುರ ಗ್ರಾಮದಲ್ಲಿ 486 ಎಕರೆ ಭೂಮಿಯನ್ನು ಖರೀದಿಸಿದ್ದರು. ವಾದ್ರಾ ಕೂಡ 2005-06 ರ ನಡುವೆ ಅದೇ ಗ್ರಾಮದಲ್ಲಿ ಪಹ್ವಾರಿಂದ 40.8 ಎಕರೆ ಭೂಮಿಯನ್ನು ಖರೀದಿಸಿದ್ದರು ಮತ್ತು ಅದನ್ನು 2010ರಲ್ಲಿ ಪಹ್ವಾಗೆ ಮಾರಾಟ ಮಾಡಿದ್ದರು. ಪ್ರಿಯಾಂಕಾ ಗಾಂಧಿಯವರೂ 2006ರಲ್ಲಿ ಅದೇ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಖರೀದಿಸಿದ್ದರು ಮತ್ತು ಅದನ್ನು 2010ರಲ್ಲಿ ಪಹ್ವಾಗೆ ಮಾರಾಟ ಮಾಡಿದ್ದರು. ಈ ವಹಿವಾಟುಗಳಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಈ.ಡಿ. ಆರೋಪಿಸಿದೆ.