ವಿಶ್ವಸಂಸ್ಥೆಯಲ್ಲಿ ಗಾಝಾ ಕದನ ವಿರಾಮ ನಿರ್ಣಯದಿಂದ ದೂರ ಉಳಿದ ಭಾರತ: ಪ್ರಿಯಾಂಕಾ ಗಾಂಧಿ ಖಂಡನೆ
ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಗೈರುಹಾಜರಾಗಿರುವ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಆಘಾತ ವ್ಯಕ್ತಪಡಿಸಿದ್ದಾರೆ.
“ಫೆಲೆಸ್ತೀನ್ನಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ನಿರ್ನಾಮವಾಗುತ್ತಿರುವುದನ್ನು ಮೌನವಾಗಿ ನೋಡುವುದು ಭಾರತವು ನಿಂತಿರುವ ಪ್ರತಿಯೊಂದಕ್ಕೂ ವಿರುದ್ಧವಾಗಿದೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಒಪ್ಪಂದ ಮತ್ತು ಗಾಝಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕಾಗಿ ಕರೆ ನೀಡಿ 'ನಾಗರಿಕರ ರಕ್ಷಣೆ ಮತ್ತು ಕಾನೂನು ಮತ್ತು ಮಾನವೀಯ ಜವಾಬ್ದಾರಿಗಳನ್ನು ಎತ್ತಿಹಿಡಿಯುವುದು' ಎಂಬ ಶೀರ್ಷಿಕೆಯ ಜೋರ್ಡಾನ್ ಕರಡು ನಿರ್ಣಯದ ಮೇಲೆ ನಡೆದ ಮತದಾನದಿಂದ ಭಾರತ ದೂರ ಉಳಿದಿದೆ.
ಮಹಾತ್ಮ ಗಾಂಧಿಯವರ "ಕಣ್ಣಿಗೆ ಒಂದು ಕಣ್ಣು ಇಡೀ ಜಗತ್ತನ್ನು ಕುರುಡನನ್ನಾಗಿ ಮಾಡುತ್ತದೆ" ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿಯವರು, “ಗಾಝಾದಲ್ಲಿ ಕದನ ವಿರಾಮಕ್ಕಾಗಿ ನಡೆದ ಮತದಾನದಿಂದ ನಮ್ಮ ದೇಶವು ದೂರ ಉಳಿದಿರುವುದಕ್ಕೆ ನನಗೆ ಆಘಾತ ಮತ್ತು ನಾಚಿಕೆಯಾಗುತ್ತಿದೆ” ಎಂದು ಹೇಳಿದ್ದಾರೆ.
"ನಮ್ಮ ದೇಶವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ಸ್ಥಾಪಿತವಾಗಿದೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ ತತ್ವಗಳು, ಈ ತತ್ವಗಳು ನಮ್ಮ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸುವ ಸಂವಿಧಾನದ ಆಧಾರವಾಗಿದೆ" ಎಂದು ಅವರು ಹೇಳಿದ್ದಾರೆ.
ಹಮಾಸ್ ನಡೆಸಿದ ʼದಾಳಿʼಯ ಬಗ್ಗೆ ಒಂದು ಪದವನ್ನು ಉಲ್ಲೇಖಿಸಿಲ್ಲ ಎಂದು ಕಾರಣ ನೀಡಿ ಭಾರತ ನಿರ್ಣಯದಿಂದ ದೂರವುಳಿದಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಂಡಿಸಲಾದ ಈ ಗೊತ್ತುವಳಿಗೆ 120 ದೇಶಗಳು ಬೆಂಬಲ ಸೂಚಿಸಿದರೆ, ಇಸ್ರೇಲ್, ಅಮೆರಿಕಾ, ಹಂಗೇರಿ ಹಾಗೂ ಐದು ಪೆಸಿಫಿಕ್ ದ್ವೀಪ ರಾಷ್ಟ್ರಗಳನ್ನು ಒಳಗೊಂಡಂತೆ ಕೇವಲ 14 ದೇಶಗಳು ಮಾತ್ರ ಅದರ ವಿರುದ್ಧ ಮತ ಚಲಾಯಿಸಿದವು. ಮತದಾನದಿಂದ ದೂರ ಉಳಿದ 45 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದ್ದು, ಅವೆಲ್ಲವೂ ಪಾಶ್ವಿಮಾತ್ಯ ಸೇನಾ ಮೈತ್ರಿಕೂಟದ ಭಾಗವಾಗಿವೆ. ಅವೆಲ್ಲವೂ ಶುಕ್ರವಾರ ಮಧ್ಯಾಹ್ನ ನ್ಯೂಯಾರ್ಕ್ ನಲ್ಲಿ ನಡೆದ ತುರ್ತು ವಿಶ್ವ ಸಂಸ್ಥೆ ಸಾಮಾನ್ಯ ಅಧಿವೇಶನದ ಮತದಾನದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದವು.