ಫೆಲೆಸ್ತೀನ್ ಬಳಿಕ ಬಾಂಗ್ಲಾ ಪರ ಬ್ಯಾಗ್ ಧರಿಸಿ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ (Photo: X/@Pawankhera)
ಹೊಸದಿಲ್ಲಿ: ಫೆಲೆಸ್ತೀನ್ ಪರ ಬ್ಯಾಗ್ ಧರಿಸಿ ನಿನ್ನೆ ವಿವಾದಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಇಂದು (ಮಂಗಳವಾರ) 'Justice for Bangladesh Hindus' ಎಂದು ಮುದ್ರಿತವಾಗಿರುವ ಬ್ಯಾಗ್ ಧರಿಸಿ ಸಂಸತ್ತಿಗೆ ಆಗಮಿಸಿ ಮತ್ತೊಮ್ಮೆ ಗಮನ ಸೆಳೆದರು.
ಸೋಮವಾರ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಸಂಸತ್ತಿಗೆ ಬಂದ ಪ್ರಿಯಾಂಕಾ ಗಾಂಧಿ, ಫೆಲೆಸ್ತೀನ್ಗೆ ಬೆಂಬಲ ವ್ಯಕ್ತಪಡಿಸಲು 'ಫೆಲೆಸ್ತೀನ್' ಎಂದು ಮುದ್ರಿತವಾಗಿರುವ ಬ್ಯಾಗ್ ಧರಿಸಿ ಬಂದಿದ್ದರು. ಆ ಚೀಲದ ಮೇಲೆ ಫೆಲೆಸ್ತೀನ್ ಪ್ರಾಂತ್ಯದಲ್ಲಿ ಪ್ರತಿರೋಧವಾಗಿ ಹೆಸರಾಗಿರುವ ಕಲ್ಲಂಗಡಿ ಸೇರಿದಂತೆ ಫೆಲೆಸ್ತೀನ್ಗೆ ಬೆಂಬಲ ಸೂಚಿಸುವ ಹಲವು ಸಂಕೇತಗಳು ಮುದ್ರಣಗೊಂಡಿದ್ದವು.
ಪ್ರಿಯಾಂಕಾ ವಾದ್ರಾ ತಮ್ಮ ಚೀಲವನ್ನು ತೋರಿಸುತ್ತಿರುವ ಚಿತ್ರವನ್ನು ಹಂಚಿಕೊಂಡ ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮಹಮ್ಮದ್ ಅವರು, ”ಪ್ರಿಯಾಂಕಾ ಗಾಂಧಿ ಅವರು ತಮ್ಮ ಬೆಂಬಲವನ್ನು ಸಂಕೇತಿಸುವ ವಿಶೇಷ ಚೀಲವನ್ನು ಹೊತ್ತುಕೊಂಡು ಫೆಲೆಸ್ತೀನ್ ಜೊತೆ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಇದು ಕರುಣೆ, ನ್ಯಾಯ ಮತ್ತು ಮಾನವೀಯತೆಯ ಬದ್ಧತೆಯ ಸೂಚಕ! ಜಿನೀವಾ ಸಮಾವೇಶವನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿದೆ" ಎಂದು ಬರೆದಿದ್ದರು. ಇದರ ಬೆನ್ನಿಗೇ ಬಿಜೆಪಿಯ ನಾಯಕ ಸಂಬಿತ್ ಪಾತ್ರ, ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ, ಬಿಜೆಪಿ ಸಂಸದ ಗುಲಾಂ ಅಲಿ ಖತನಾ ಮುಂತಾದವರು ಪ್ರಿಯಾಂಕಾ ಗಾಂಧಿ ಮೇಲೆ ಮುಗಿ ಬಿದ್ದಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ, "ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರ್ದಯವಾಗಿ ದೌರ್ಜನ್ಯವೆಸಗುತ್ತಿದ್ದರೂ, ಪ್ರಿಯಾಂಕಾ ಗಾಂಧಿ ಆದ್ಯತೆ ಮಾತ್ರ ಫೆಲೆಸ್ತೀನ್ಗೆ ಬೆಂಬಲ ಸೂಚಿಸುವ ತುಷ್ಟೀಕರಣ ರಾಜಕಾರಣವಾಗಿದೆ. ಹಿಂದೂಗಳ ನರಳಾಟದ ಬಗ್ಗೆ ಆಕೆ ತಾಳಿರುವ ಮೌನ, ಆಕೆಯ ಉದ್ದೇಶದ ಸ್ವರೂಪವನ್ನು ಹೇಳುತ್ತಿದೆ. ಆಕೆ ಹಿಂದೂಗಳನ್ನು ಮೂರನೆ ದರ್ಜೆ ಪ್ರಜೆಗಳಿಗಿಂತ ಕಡೆಯಾಗಿ ಭಾವಿಸಿದ್ದಾರೆ" ಎಂದು ಕಟು ಟೀಕಾಪ್ರಹಾರ ನಡೆಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಪ್ರಿಯಾಂಕಾ ಗಾಂಧಿ, ಇದು ಅಕ್ಷರಶಃ ಪುರುಷಪ್ರಧಾನ ಟೀಕೆಯಾಗಿದ್ದು, ನಾನು ಏನು ತೊಡಬೇಕು ಮತ್ತು ಏನು ತೊಡಬಾರದು ಎಂದು ಹೇಳುತ್ತಿದೆ. ನನಗೇನೂ ಬೇಕೊ ಅದನ್ನೇ ತೊಡುತ್ತೇನೆ. ನಾನು ಈ ಪುರುಷ ಪ್ರಾಧಾನ್ಯತೆಗೆ ಸೊಪ್ಪು ಹಾಕುವುದಿಲ್ಲ ಎಂದು ಸಂಸತ್ತಿನ ಹೊರಗೆ ಮಾಧ್ಯಮ ಮಂದಿಯನ್ನುದ್ದೇಶಿಸಿ ಹೇಳಿದ್ದರು.
ಇದರ ಬೆನ್ನಿಗೇ, ಇಂದು ಬಾಂಗ್ಲಾದೇಶದ ಹಿಂದೂಗಳ ಪರ ಚೀಲವನ್ನು ನೇತಾಕಿಕೊಂಡು ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ, ಮತ್ತೊಮ್ಮೆ ಸುದ್ದಿಯ ಕೇಂದ್ರ ಬಿಂದುವಾಗಿ ಬದಲಾಗಿದ್ದಾರೆ.