ಕೇರಳ | ಗೋಡ್ಸೆಯನ್ನು ಶ್ಲಾಘಿಸಿ ವಿವಾದ ಸೃಷ್ಟಿಸಿದ್ದ ಪ್ರಾಧ್ಯಾಪಕಿಗೆ ಭಡ್ತಿ : ಎನ್ಐಟಿ ಕ್ಯಾಲಿಕಟ್ನ ಡೀನ್ ಆಗಿ ನೇಮಕ!

ಪ್ರೊಫೆಸರ್ ಶೈಜಾ ಆಂಡವನ್ (Photo credit: mathrubhumi.com)
ಕೋಝಿಕ್ಕೋಡ್: ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸಿ ವಿವಾದ ಸೃಷ್ಟಿಸಿದ್ದ ಎನ್ಐಟಿ(NIT) ಕ್ಯಾಲಿಕಟ್ನ ಪ್ರೊಫೆಸರ್ ಶೈಜಾ ಆಂಡವನ್ ಅವರನ್ನು ಎನ್ಐಟಿ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ನೂತನ ಡೀನ್ ಆಗಿ ನೇಮಿಸಲಾಗಿದೆ ಎಂದು mathrubhumi.com ವರದಿ ಮಾಡಿದೆ.
ಡಾ. ಪ್ರಿಯಾ ಚಂದ್ರನ್ ಅವರಿಂದ ತೆರವಾದ ಸ್ಥಾನಕ್ಕೆ ಶೈಜಾ ಆಂಡವನ್ ಅವರನ್ನು ನೇಮಿಸಿ ಎನ್ಐಟಿ ಕ್ಯಾಲಿಕಟ್ನ ರಿಜಿಸ್ಟ್ರಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಡಾ. ಶೈಜಾ ಅವರು ಪ್ರಸ್ತುತ ಎನ್ಐಟಿ ಕ್ಯಾಲಿಕಟ್ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 2024ರ ಜನವರಿಯಲ್ಲಿ ವಕೀಲರಾದ ಕೃಷ್ಣರಾಜ್ ಗೋಡ್ಸೆಯ ಚಿತ್ರವನ್ನು ಒಳಗೊಂಡ ಪೋಸ್ಟನ್ನು ಹಂಚಿಕೊಂಡು, ʼಹಿಂದೂ ಮಹಾಸಭಾ ಸದಸ್ಯನಾದ ನಾಥುರಾಮ್ ವಿನಾಯಕ್ ಗೋಡ್ಸೆʼ ಭಾರತದ ಅನೇಕ ಜನರಿಗೆ ಹೀರೋ ಎಂದು ಬರೆದಿದ್ದರು. ಈ ಪೋಸ್ಟ್ಗೆ ʼಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆಯ ಬಗ್ಗೆ ಹೆಮ್ಮೆಯಿದೆʼ ಎಂದು ಶೈಜಾ ಆಂಡವನ್ ಪ್ರತಿಕ್ರಿಯಿಸಿದ್ದರು. ಇದು ವ್ಯಾಪಕವಾಗಿ ಟೀಕೆಗೆ ಗುರಿಯಾಗಿತ್ತು. ವಿವಾದ ಭುಗಿಲೆದ್ದ ನಂತರ ಶೈಜಾ ಕಾಮೆಂಟ್ ಅನ್ನು ಡಿಲೀಟ್ ಮಾಡಿದ್ದರು.
ಶೈಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಕೋಝಿಕ್ಕೋಡ್ ಸಿಟಿ ಪೊಲೀಸರು ಶೈಜಾ ವಿರುದ್ಧ ಐಪಿಸಿ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಶೈಜಾ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಶೈಜಾ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು.
ನೇಮಕಾತಿ ರದ್ದತಿಗೆ ಕಾಂಗ್ರೆಸ್ ಆಗ್ರಹ:
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಕೋಝಿಕ್ಕೋಡ್ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಶೈಜಾ ಅವರನ್ನು ಡೀನ್ ಆಗಿ ನೇಮಕ ಮಾಡಿರುವುದನ್ನು ರದ್ದುಗೊಳಿಸಬೇಕು. ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಆರೆಸ್ಸೆಸ್ ಅಜೆಂಡಾ ಜಾರಿಯಾಗುತ್ತಿದೆ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತಿದೆ. ಗಾಂಧೀಜಿಯನ್ನು ಅವಮಾನಿಸಿದ ಪ್ರಾಧ್ಯಾಪಕರಿಗೆ ಬಡ್ತಿ ನೀಡಲಾಗಿದೆ. ಅವರ ನೇಮಕವನ್ನು ಹಿಂಪಡೆಯುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.