ದೀರ್ಘಕಾಲ ಮುಖ್ಯಮಂತ್ರಿಯ ಅನುಪಸ್ಥಿತಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ: ದಿಲ್ಲಿ ಹೈಕೋರ್ಟ್
ಕೇಜ್ರಿವಾಲ್ ಅನುಪಸ್ಥಿತಿಯಿಂದಾಗಿ ದಿಲ್ಲಿ ಆಡಳಿತ ನಿಂತನೀರಾಗಿದೆ ಎಂದ ನ್ಯಾಯಪೀಠ

ಅರವಿಂದ್ ಕೇಜ್ರಿವಾಲ್ , ದಿಲ್ಲಿ ಹೈಕೋರ್ಟ್ | PC : PTI
ಹೊಸದಿಲ್ಲಿ: ಮುಖ್ಯಮಂತ್ರಿಯೊಬ್ಬರು ದೀರ್ಘ ಸಮಯ ಗೈರಾಗಿರುವುದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗುತ್ತದೆ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರ ಒದಗಿಸುವುದಕ್ಕೆ ಅಡ್ಡಿಯಾಗದು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಎನ್ಜಿಒ ಸೋಶಿಯಲ್ ಜೂರಿಸ್ಟ್ ದಾಖಲಿಸಿದ್ದ ಪಿಐಎಲ್ ಅನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಪಿ ಎಸ್ ಅರೋರಾ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿ ಮೇಲಿನಂತೆ ಹೇಳಿದೆ.
ದಿಲ್ಲಿ ಮುನಿಸಿಪಲ್ ಕೌನ್ಸಿಲ್ ನಡೆಸುವ ಶಾಲೆಗಳ ವಿದ್ಯಾರ್ಥಿಗಳು ಪಠ್ಯಪುಸ್ತಕಗಳು, ಇತರ ಬರವಣಿಗೆ ಸಾಮಗ್ರಿಗಳು ಮತ್ತು ಸಮವಸ್ತ್ರ ಪಡೆದಿಲ್ಲ ಎಂದು ಸಂಸ್ಥೆ ತನ್ನ ಅರ್ಜಿಯಲ್ಲಿ ದೂರಿತ್ತು.
ಹಣಕಾಸುಗಳ ಕುರಿತಂತೆ ಮುನಿಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿ ನಿರ್ಧಾರಗಳನ್ನು ಕೈಗೊಳ್ಳಬಹುದು ಆದರೆ ಈ ಸಮಿತಿ ರಚನೆ ಕುರಿತಾದ ವಿವಾದ ಸುಪ್ರಿಂ ಕೋರ್ಟ್ ಮುಂದೆ ಬಾಕಿಯಿದೆ ಎಂದು ವಿಚಾರಣೆ ವೇಳೆ ದಿಲ್ಲಿ ಸರ್ಕಾರದ ವಕೀಲರು ಹೇಳಿದರು.
ಮುನಿಸಿಪಲ್ ಕಾರ್ಪೊರೇಷನ್ ಆಯುಕ್ತರಿಗೆ ವಿತ್ತೀಯ ಅಧಿಕಾರಗಳನ್ನು ನೀಡಲು ಸಿಎಂ ಅನುಮತಿಯಿದೆ ಅದರೆ ಸೀಎಂ ಈಗ ಜೈಲಿನಲ್ಲಿದ್ದಾರೆ ಎಂದು ಸರ್ಕಾರದ ವಕೀಲರು ಹೇಳಿದರು.
ಕೇಜ್ರಿವಾಲ್ ಅವರ ಅನುಪಸ್ಥಿತಿಯಿಂದಾಗಿ ದಿಲ್ಲಿ ಆಡಳಿತ ನಿಂತನೀರಾಗಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ನ್ಯಾಯಪೀಠ ಹೇಳಿದೆ.
“ಯಾವುದೇ ರಾಜ್ಯದಲ್ಲಿ ಸಿಎಂ ಹುದ್ದೆ ಕೇವಲ ಅಲಂಕಾರಿಕ ಹುದ್ದೆಯಲ್ಲ. ಈ ಹುದ್ದೆಯಲ್ಲಿರುವವರು ದಿನದ 24 ಗಂಟೆ ಲಭ್ಯರಿರಬೇಕು. ಈ ಹುದ್ದೆಯನ್ನು ಹೊಂದಿರುವ ಯಾವುದೇ ವ್ಯಕ್ತಿ ಸಂಪರ್ಕಕ್ಕೆ ಸಿಗದೇ ಇರುವುದು ಅಥವಾ ದೀರ್ಘ ಕಾಲ ಗೈರಾಗುವುದು ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯಲಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರಗಳನ್ನು ಶಿಕ್ಷಣ ಹಕ್ಕು ಕಾಯಿದೆಯಡಿ ಖಾತ್ರಿಪಡಿಸಲಾಗಿದೆ ಮತ್ತು ಸಂವಿಧಾನದ ವಿಧಿ 21ಎ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಜೈಲಿನಲ್ಲಿರುವಾಗಲೂ ಸಿಎಂ ಹುದ್ದೆಯಲ್ಲಿ ಮುಂದುವರಿಯುವ ನಿರ್ಧಾರ ಕೇಜ್ರಿವಾಲ್ ಅವರ ವೈಯಕ್ತಿಕ ನಿರ್ಧಾರವಾಗಿದೆ. ಹಾಗಿರುವಾಗ ಸಿಎಂ ಲಭ್ಯರಿಲ್ಲ ಎಬ ಮಾತ್ರಕ್ಕೆ ಮಕ್ಕಳ ಮೂಲಭೂತ ಹಕ್ಕುಗಳನ್ನು ಕಸಿಯಲಾಗದು, ಎಂದು ಹೇಳಿದ ನ್ಯಾಯಾಲಯ ಪಠ್ಯಪುಸ್ತಕ ಮತ್ತಿತರ ಸಾಮಗ್ರಿಗಳ ಖರೀದಿಗೆ ತಗಲುವ ವೆಚ್ಚ ಭರಿಸುವಂತೆ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಆಯುಕ್ತರಿಗೆ ಸೂಚಿಸಿದೆ.
ಜೈಲಿನಲ್ಲಿದ್ದುಕೊಂಡೇ ಸಿಎಂ ಆಗಿ ಮುಂದುವರಿಯುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಯ ಬದಲು ವೈಯಕ್ತಿಕ ಹಿತಾಸಕ್ತಿಗೆ ಕೇಜ್ರಿವಾಲ್ ಆದ್ಯತೆ ನೀಡಿದ್ದಾರೆಂದು ಹೈಕೋರ್ಟ್ ಈ ಹಿಂದೆ ಹೇಳಿತ್ತು.
ಕೇಜ್ರಿವಾಲ್ ಸಿಎಂ ಆಗಿ ಮುಂದುವರಿಯಲಿದ್ದಾರೆ ಅವರು ರಾಜಕೀಯ ಸಂಚಿನ ಬಲಿಪಶು ಎಂದು ಆಪ್ ಹೇಳಿದೆ.