ಅಭ್ಯರ್ಥಿಗಳಿಂದ ಪ್ರತಿಭಟನೆ: ಉತ್ತರ ಪ್ರದೇಶ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆ ಮತ್ತೆ ಮುಂದೂಡಿಕೆ
PC : PTI
ಲಕ್ನೊ: ಪ್ರಾಂತೀಯ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯನ್ನು ಡಿಸೆಂಬರ್ 22ರಂದು ಒಂದೇ ದಿನಕ್ಕೆ ಮರುನಿಗದಿಗೊಳಿಸಲಾಗಿದೆ ಎಂದು ಶುಕ್ರವಾರ ಉತ್ತರಪ್ರದೇಶ ಲೋಕಸೇವಾ ಆಯೋಗ ಪ್ರಕಟಿಸಿದೆ.
ಇದಕ್ಕೂ ಮುನ್ನ, ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯೊಂದಿಗೆ ಪರಾಮರ್ಶೆ ಅಧಿಕಾರಿ ಮತ್ತು ಸಹಾಯಕ ಪರಾಮರ್ಶೆ ಅಧಿಕಾರಿ ಪರೀಕ್ಷೆಗಳನ್ನು ಎರಡು ದಿನ, ಎರಡು ಪಾಳಿಗಳಲ್ಲಿ ನಡೆಸಲಾಗುವುದು ಎಂಬ ಉತ್ತರ ಪ್ರದೇಶ ಲೋಕಸೇವಾ ಆಯೋಗದ ಪ್ರಕಟಣೆಯನ್ನು ವಿರೋಧಿಸಿ ಪ್ರಯಾಗ್ ರಾಜ್ ನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಸಾವಿರಾರು ಅಭ್ಯರ್ಥಿಗಳು ಆಯೋಗದ ನಿರ್ಧಾರವನ್ನು ವಿರೋಧಿಸಿ ಮೆರವಣಿಗೆ ನಡೆಸಿದ್ದರು. ಇದಾದ ನಾಲ್ಕು ದಿನಗಳ ನಂತರ, ಆಯೋಗದಿಂದ ಈ ಪ್ರಕಟಣೆ ಹೊರ ಬಿದ್ದಿದೆ.
ವಿವಿಧ ಸರಕಾರಿ ಹುದ್ದೆಗಳ ನೇಮಕಾತಿ ಜವಾಬ್ದಾರಿ ಆಯೋಗದ್ದಾಗಿದೆ.
ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಡಿಸೆಂಬರ್ 7 ಹಾಗೂ ಡಿಸೆಂಬರ್ 8ರಂದು ಎರಡು ಪಾಳಿಗಳಲ್ಲಿ ಯೋಜಿಸಲಾಗಿತ್ತು. ಪರಾಮರ್ಶೆ ಅಧಿಕಾರಿ ಹಾಗೂ ಸಹಾಯಕ ಪರಾಮರ್ಶೆ ಅಧಿಕಾರಿ ಪರೀಕ್ಷೆಗಳನ್ನು ಡಿಸೆಂಬರ್ 22 ಹಾಗೂ ಡಿಸೆಂಬರ್ 23ರಂದು ನಿಗದಿಗೊಳಿಸಲಾಗಿತ್ತಾದರೂ, ನಂತರ ಈ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇವುಗಳ ಪರೀಕ್ಷಾ ದಿನಾಂಕವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.
ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಡಿಸೆಂಬರ್ 22ರಂದು ಎರಡು ಪಾಳಿಗಳಲ್ಲಿ ನಡೆಸಲಾಗುವುದು ಎಂದು ಶುಕ್ರವಾರ ಉತ್ತರ ಪ್ರದೇಶ ನಾಗರಿಕ ಸೇವಾ ಆಯೋಗದ ಉಪ ಕಾರ್ಯದರ್ಶಿ ಓಂಕಾರ್ ನಾಥ್ ಸಿಂಗ್ ಪ್ರಕಟಿಸಿದ್ದರು.
ಈ ಪ್ರಕಟಣೆಯ ನಂತರ, ಪ್ರಯಾಗ್ ರಾಜ್ ನಲ್ಲಿರುವ ಆಯೋಗದ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಗಳು ಸ್ಥಗಿತಗೊಂಡಿವೆ.
ನವೆಂಬರ್ 11ರಿಂದ ಪ್ರಾರಂಭಗೊಂಡಿದ್ದ ಈ ಪ್ರತಿಭಟನೆಯಲ್ಲಿ 10,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ರಾಜ್ಯದೆಲ್ಲೆಡೆಯಿಂದ ಪಾಲ್ಗೊಂಡಿದ್ದರು. ಹಲವು ಪಾಳಿಗಳಲ್ಲಿ ನಡೆಯವ ಪರೀಕ್ಷೆಗೆ ಒದಗಿಸುವ ವಿಭಿನ್ನ ಪ್ರಶ್ನೆ ಪತ್ರಿಕೆಗಳಿಂದ ಉದ್ಯೋಗಾಕಾಂಕ್ಷಿಗಳು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ, ಪರೀಕ್ಷೆಯನ್ನು ಹಲವು ಪಾಳಿಗಳಲ್ಲಿ, ಹಲವು ದಿನ ನಡೆಸುವುದರಿಂದ ಪ್ರಶ್ನೆದ ಪತ್ರಿಕೆ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬುದೂ ಕೆಲವು ಪ್ರತಿಭಟನಾಕಾರರ ವಾದವಾಗಿತ್ತು.