ರಾಜಸ್ಥಾನ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಸ್ಫೋಟಗೊಂಡ ಅಸಮಾಧಾನ
ವಸುಂಧರಾ ರಾಜೇ ಬೆಂಬಲಿಗರಿಗೆ ದೊರೆಯದ ಟಿಕೆಟ್
ಸಾಂದರ್ಭಿಕ ಚಿತ್ರ (PTI)
ಜೈಪುರ್: ಮುಂದಿನ ತಿಂಗಳು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆಯೇ ಟಿಕೆಟ್ ವಂಚಿತ ಹಲವಾರು ಮಂದಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ನಾಯಕಿ ಹಾಗೂ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ ಅವರ ಹಲವು ಬೆಂಬಲಿಗರ ಹೆಸರುಗಳು ಪಟ್ಟಿಯಲ್ಲಿ ಕಾಣಿಸದೇ ಇರುವುದು ಕೂಡ ಅಸಹನೆಗೆ ಕಾರಣವಾಗಿದೆ.
ಜೈಪುರ ರಾಜಮನೆತನದ ಸದಸ್ಯೆ ಹಾಗೂ ವಿದ್ಯಾಧರ್ ನಗರ ಕ್ಷೇತ್ರದ ಸಂಸದೆ ದಿಯಾ ಕುಮಾರಿ ಅವರಿಗೆ ಟಿಕೆಟ್ ನೀಡಿರುವುದು ಮಾಜಿ ಸಿಎಂ ಹಾಗೂ ಮಾಜಿ ಉಪರಾಷ್ಟ್ರಪತಿ ಭೈರೋ ಸಿಂಗ್ ಶೇಖಾವತ್ ಅವರ ಅಳಿಯ ನರ್ಪತ್ ಸಿಂಗ್ ರಜ್ವಿ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಮುಘಲರಿಗೆ ಶರಣಾದ ಮತ್ತು ಮಹಾರಾಣ ಪ್ರತಾಪ್ ಅವರನ್ನು ವಿರೋಧಿಸಿದ್ದ ಕುಟುಂಬವೊಂದಕ್ಕೆ ಪಕ್ಷ ಏಕೆ ಮನ್ನಣೆ ನೀಡುತ್ತಿದೆ ಎಂದು ತಿಳಿದಿಲ್ಲ ಎಂದು ರಜ್ವಿ ಹೇಳಿರುವುದು ಕೂಡ ವಿವಾದಕ್ಕೀಡಾಗಿದೆ. ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಮಾತುಕತೆ ನಂತರ ಅವರು ತಮ್ಮ ಹೇಳಿಕೆ ವಾಪಸ್ ಪಡೆದರಾದರೂ ಅವರ ಸಂದರ್ಶನದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನೊಂದೆಡೆ ರಾಜಪಾಲ್ ಸಿಂಗ್ ಶೇಖಾವತ್ ಅವರನ್ನು ಕಡೆಗಣಿಸಿ ಸಂಸದ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರುಗೆ ಝೊಟ್ವಾರ (ಜೈಪುರ್) ಟಿಕೆಟ್ ನೀಡಲಾಗಿದೆ. ಶೇಖಾವತ್ ಅವರು ವಸುಂಧರಾ ರಾಜೇ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರಿಗೆ ಟಿಕೆಟ್ ನಿರಾಕರಣೆ ಬೆನ್ನಲ್ಲೇ ಅವರ ಬೆಂಬಲಿಗರು ವಸುಂಧರಾ ಅವರ ನಿವಾಸದಲ್ಲಿ ಜಮಾಯಿಸಿದ್ದಾರೆ.
ತಮಗೆ ಟಿಕೆಟ್ ನಿರಾಕರಿಸಿರುವುದು ಆಘಾತ ಮೂಡಿಸಿದೆ ಎಂದು ರಾಜಪಾಲ್ ಸಿಂಗ್ ಶೇಖಾವತ್ ಹೇಳಿದ್ದಾರೆ. ಟಿಕೆಟ್ ನಿರಾಕರಣೆ ವಿರೋಧಿಸಿ ಹಲವಾರು ಕೌನ್ಸಿಲರ್ಗಳು ರಾಜೀನಾಮೆ ನೀಡಲಿದ್ದಾರೆಂಬ ಮಾಹಿತಿಯಿದೆ.
ವಸುಂಧರಾ ರಾಜೇ ಅವರ ಕಟ್ಟಾ ಬೆಂಬಲಿಗರಾಗಿರುವ ರೋಹಿತಾಶ್ವ ಶರ್ಮ ಮಾಜಿ ಸಾರಿಗೆ ಸಚಿವರಾಗಿದ್ದು ಬನ್ಸೂರ್ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರೆ ಅಲ್ಲಿ ದೇವಿ ಸಿಂಗ್ ಶೇಖಾವತ್ ಅವರಿಗೆ ಟಿಕೆಟ್ ನೀಡಲಾಗಿದೆ.