'ಶಿಷ್ಟಾಚಾರದಿಂದ ಇತರರಿಗೆ ಅನಾನಕೂಲವಾಗಬಾರದು': ರೈಲು ಪ್ರಯಾಣದ ಕುರಿತು ನ್ಯಾಯಾಧೀಶರು ದೂರಿದ ನಂತರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಜೆಐ ಪತ್ರ
ಡಿ. ವೈ. ಚಂದ್ರಚೂಡ್
ಹೊಸದಿಲ್ಲಿ: ರೈಲು ಪ್ರಯಾಣವೊಂದರ ವೇಳೆ ತಾವು ಎದುರಿಸಿದ ಅನಾನುಕೂಲತೆ ಕುರಿತು “ವಿವರಣೆ” ಕೋರಿದ ನ್ಯಾಯಾಧೀಶರೊಬ್ಬರ ಪ್ರಕರಣವನ್ನು ಉಲ್ಲೇಖಿಸಿ ಹಾಗೂ ಅದಕ್ಕೆ ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಎಲ್ಲಾ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಈ ಘಟನೆಯು “ನ್ಯಾಯಾಂಗದ ಒಳಗೂ ಹೊರಗೂ ಸಮರ್ಥನೀಯ ಕಳವಳ”ವನ್ನುಂಟು ಮಾಡಿದೆ ಎಂದು ಪತ್ರದಲ್ಲಿ ಹೇಳಿರುವ ಸಿಜೆಐ ನ್ಯಾಯಾಂಗದೊಳಗೆ ಆತ್ಮಾವಲೋಕನ ಮತ್ತು ಸಮಾಲೋಚನೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ತಮ್ಮ ರೈಲು ಪ್ರಯಾಣದ ಕುರಿತು ಉಲ್ಲೇಖಿಸಿದ್ದ ನ್ಯಾಯಾಧೀಶರೊಬ್ಬರು ತಮಗೆ ತಿಂಡಿತಿನಿಸು ಪಡೆಯಲು ಸಾಧ್ಯವಾಗಿಲ್ಲದೇ ಇರುವುದಕ್ಕೆ ಮತ್ತು ಟಿಟಿಇ ಅಥವಾ ರೈಲ್ವೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ದೊರೆಯದೇ ಇರುವುದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ರೈಲ್ವೆ ಪ್ರಬಂಧಕರಿಂದ ವಿವರಣೆ ಕೇಳಬೇಕೆಂದು ಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಹೇಳಿದ್ದಾರೆ. ರಿಜಿಸ್ಟ್ರಾರ್ ಈ ಕುರಿತು ಪತ್ರ ಬರೆದು ನ್ಯಾಯಾಧೀಶರು ಎದುರಿಸಿದ್ದ ಅನಾನುಕೂಲತೆಯನ್ನು ವಿವರಿಸಿದ್ದರು.
ಈ ಘಟನೆಯ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವ ಸಿಜೆಐ, ರೈಲ್ವೆ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವ್ಯಾಪ್ತಿ ಹೈಕೋರ್ಟಿಗಿಲ್ಲ ಎಂದು ಹೇಳಿದ್ದಾರೆ.
“ನ್ಯಾಯಾಧೀಶರಿಗೆ ಲಭ್ಯವಿರುವ ಶಿಷ್ಟಾಚಾರ ಸವಲತ್ತುಗಳನ್ನು ಅವರು ಅಧಿಕಾರ ಚಲಾಯಿಸಲು ಅಥವಾ ಇತರ ಸಮಾಜದಿಂದ ಅವರನ್ನು ಬೇರ್ಪಡಿಸುವ ರೀತಿಯಲ್ಲಿ ಅವರು ಸವಲತ್ತುಗಳಿಗೆ ಬೇಡಿಕೆಯಿಡಲು ಬಳಸಬಾರದು,” ಎಂದು ಸಿಜೆಐ ಹೇಳಿದರು.
“ಪ್ರೊಟೋಕಾಲ್ ಸವಲತ್ತುಗಳನ್ನು ಇತರರಿಗೆ ಅನಾನುಕೂಲತೆಯುಂಟು ಮಾಡಲು ಬಳಸಬಾರದು ಅಥವಾ ನ್ಯಾಯಾಂಗವು ಟೀಕೆಯೆದುರಿಸುವಂತಾಗಲು ಬಳಸಬಾರದು,” ಎಂದು ಸಿಜೆಐ ತಮ್ಮ ಪತ್ರದಲ್ಲಿ ಹೇಳಿದ್ದಾರೆ.