ತೆರೆದ ಕಾರಾಗೃಹಗಳ ಬಗ್ಗೆ ಪೂರ್ಣ ಮಾಹಿತಿ ಒದಗಿಸಿ : ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
ಸುಪ್ರೀಂ ಕೋರ್ಟ್
ಹೊಸದಿಲ್ಲಿ : ತೆರೆದ ಕಾರಾಗೃಹಗಳು ಕಾರ್ಯಾಚರಿಸುತ್ತಿರುವ ವಿಧಾನಕ್ಕೆ ಸಂಬಂಧಿಸಿ ಸಂಪೂರ್ಣ ಮಾಹಿತಿಯನ್ನು 4 ವಾರಗಳ ಒಳಗೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಹಲವು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.
ಅರೆ ತೆರೆದ ಅಥವಾ ತೆರೆದ ಕಾರಾಗೃಹಗಳ ಕೈದಿಗಳು ತಮ್ಮ ಜೀವನೋಪಾಯಕ್ಕಾಗಿ ಹಗಲು ಕಾರಾಗೃಹದಿಂದ ಹೊರಗೆ ಕಾರ್ಯ ನಿರ್ವಹಿಸಲು ಹಾಗೂ ಸಂಜೆ ಹಿಂದಿರುಗಲು ಅವಕಾಶ ನೀಡುತ್ತದೆ. ಬಿಡುಗಡೆಯಾದ ಬಳಿಕ ಕೈದಿಗಳು ಸಮಾಜದಲ್ಲಿ ಸಹಜವಾಗಿ ಬದುಕಲು ಕಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಸಮಾಜದೊಂದಿಗೆ ಬೆಸೆಯಲು ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಈ ಪರಿಕಲ್ಪನೆ ಪರಿಚಯಿಸಲಾಗಿದೆ.
ಕಾರಾಗೃಹದ ಜನದಟ್ಟಣೆಗೆ ಸಂಬಂಧಿಸಿದ ಪ್ರಕರಣದದಲ್ಲಿ ನ್ಯಾಯಾಲಯದ ಸಲಹೆಗಾರರಾಗಿರುವ ಹಿರಿಯ ನ್ಯಾಯವಾದಿ ಕೆ. ಪರಮೇಶ್ವರ್ ಅವರು ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇದುವರೆಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠಕ್ಕೆ ಮಾಹಿತಿ ನೀಡಿದರು.
ತೆರೆದ ಕಾರಾಗೃಹಗಳ ಸ್ಥಿತಿ ಗತಿ ಹಾಗೂ ಕಾರ್ಯನಿರ್ವಹಣೆ ವಿಧಾನದ ಕುರಿತು ಮಾಹಿತಿ ಕೋರಿ ಪ್ರಶ್ನಾವಳಿಗಳನ್ನು ಪ್ರಸಾರ ಮಾಡಿದ ಹೊರತಾಗಿಯೂ ದಿಲ್ಲಿ, ಹಿಮಾಚಲಪ್ರದೇಶ, ಮಧ್ಯಪ್ರದೇಶ ಹಾಗೂ ಪಂಜಾಬ್ನಂತಹ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಪಟ್ಟಿಗಳನ್ನು ಇದುವರೆಗೆ ಸಲ್ಲಿಸಿಲ್ಲ ಎಂಬುದನ್ನು ಪೀಠ ಗಮನಕ್ಕೆ ತೆಗೆದುಕೊಂಡಿತು.