ಶಿಕ್ಷೆಗೊಳಗಾದ ಜನಪ್ರತಿನಿಧಿಗಳ ಮೇಲೆ ಜೀವಮಾನ ನಿಷೇಧಕ್ಕೆ ಕೇಂದ್ರದ ವಿರೋಧ

PC : PTI
ಹೊಸದಿಲ್ಲಿ: ಶಿಕ್ಷೆಗೊಳಗಾದ ಸಂಸದರು/ಶಾಸಕರ ಮೇಲೆ ಜೀವಮಾನ ನಿಷೇಧವನ್ನು ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ವಿರೋಧಿಸಿರುವ ಕೇಂದ್ರವು,ಅಂತಹ ಅನರ್ಹತೆಯ ಅಧಿಕಾರವು ಸಂಪೂರ್ಣವಾಗಿ ಸಂಸತ್ತಿನ ವ್ಯಾಪ್ತಿಗೊಳಪಟ್ಟಿದೆ ಎಂದು ಪ್ರತಿಪಾದಿಸಿದೆ.
ಅರ್ಜಿಯನ್ನು ಪುರಸ್ಕರಿಸಿದರೆ ಅದು ಕಾನೂನನ್ನು ಬದಲಿಸುವುದಕ್ಕೆ ಅಥವಾ ನಿರ್ದಿಷ್ಟ ರೀತಿಯಲ್ಲಿ ಕಾನೂನು ರೂಪಿಸುವಂತೆ ಸಂಸತ್ತಿಗೆ ನಿರ್ದೇಶ ನೀಡುವುದಕ್ಕೆ ಸಮವಾಗುತ್ತದೆ. ಇದು ನ್ಯಾಯಾಂಗ ಪುನರ್ಪರಿಶೀಲನೆಯ ವ್ಯಾಪ್ತಿಯನ್ನು ಮೀರಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿರುವ ಕೇಂದ್ರವು, ಜೀವಮಾನ ನಿಷೇಧವು ಸೂಕ್ತವೇ ಅಲ್ಲವೇ ಎನ್ನುವುದು ಸಂಪೂರ್ಣವಾಗಿ ಸಂಸತ್ತಿನ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರಶ್ನೆಯಾಗಿದೆ ಎಂದು ಹೇಳಿದೆ.
ಶಿಕ್ಷೆಗೊಳಗಾದ ಶಾಸಕರು/ಸಂಸದರ ವಿರುದ್ಧ ದಂಡನಾ ಕ್ರಮಗಳು ಪ್ರಮಾಣಾನುಗುಣವಾಗಿರಬೇಕು ಎಂದು ವಾದಿಸಿರುವ ಸರಕಾರವು, ಅನರ್ಹತೆಯನ್ನು ನಿರ್ದಿಷ್ಟ ಅವಧಿಗೆ ಸೀಮಿತಗೊಳಿಸುವ ಮೂಲಕ ಕಾನೂನು ಅನಗತ್ಯ ಕಠಿಣ ಕ್ರಮವನ್ನು ಕೈಗೊಳ್ಳದೆ ನಿರ್ಬಂಧವನ್ನು ಖಚಿತಪಡಿಸುತ್ತದೆ ಎಂದು ಹೇಳಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯು ಶಿಕ್ಷೆಗೊಳಗಾದ ರಾಜಕಾರಣಿಗಳಿಗೆ ಜೀವಿತಾವಧಿ ನಿಷೇಧ ಹೇರಿಕೆಗೆ ಮತ್ತು ಸಂಸದರು ಹಾಗೂ ಶಾಸಕರು ಒಳಗೊಂಡಿರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಒತ್ತಾಯಿಸಿದೆ.
ಕೇಂದ್ರವು ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳು ಶಾಸಕಾಂಗ ನಿರ್ಧಾರಗಳನ್ನು ಕೇವಲ ಅವುಗಳ ಪರಿಣಾಮಕಾರಿತ್ವದ ಆಧಾರದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ.
ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಅವರ ಶಿಕ್ಷೆಯ ದಿನಾಂಕ ಅಥವಾ ಜೈಲುಶಿಕ್ಷೆಯಿಂದ ಬಿಡುಗಡೆಗೊಂಡ ದಿನಾಂಕದಿಂದ ಆರು ವರ್ಷಗಳಿಗೆ ಅನರ್ಹಗೊಳಿಸುವ ಜನತಾ ಪ್ರಾತಿನಿಧ್ಯ ಕಾಯ್ದೆ,1951ರ ಕಲಂ 8(1) ಅನ್ನು ಉಲ್ಲೇಖಿಸಿರುವ ಕೇಂದ್ರವು, ಪ್ರಶ್ನಿಸಲಾಗಿರುವ ಕಲಮ್ಗಳಡಿ ಅನರ್ಹತೆಗಳು ಸಂಸದೀಯ ನೀತಿಗೆ ಅನುಗುಣವಾಗಿ ಸಮಯ ಮಿತಿಯನ್ನು ಹೊಂದಿವೆ,ಅರ್ಜಿದಾರರ ಕೋರಿಕೆಯನ್ನು ಪುರಸ್ಕರಿಸಿ ಜೀವಮಾನ ನಿಷೇಧವನ್ನು ಹೇರುವುದು ಸೂಕ್ತವಲ್ಲ ಎಂದು ಅಫಿಡವಿಟ್ನಲ್ಲಿ ತಿಳಿಸಿದೆ.
ಜೀವಿತಾವಧಿ ಅನರ್ಹತೆಯನ್ನು ಹೇರುವ ವಿವೇಚನೆಯನ್ನು ಸಂಸತ್ತು ಮಾತ್ರ ಹೊಂದಿದೆ. ಇಂತಹ ಅಧಿಕಾರವಿದೆ ಎಂಬ ಮಾತ್ರಕ್ಕೆ ಎಲ್ಲ ಪ್ರಕರಣಗಳಲ್ಲೂ ಅದನ್ನು ಚಲಾಯಿಸಬೇಕು ಎಂದು ಅರ್ಥವಲ್ಲ ಎಂದೂ ಕೇಂದ್ರವು ವಾದಿಸಿದೆ.