ಸಾರ್ವಜನಿಕ ಲೈಂಗಿಕ ಕಿರುಕುಳ ವೀಡಿಯೊ ವೈರಲ್: ಇಂಫಾಲದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ
Photo : PTI
ಇಂಫಾಲ: ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಲೈಂಗಿಕ ಕಿರುಕುಳವನ್ನು ದಾಖಲಿಸಿರುವ ವೀಡಿಯೊ ವೈರಲ್ ಆದ ಬಳಿಕ ಘಟನೆಯನ್ನು ಖಂಡಿಸಿ ಚುರಾಚಾಂದ್ಪುರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ಓರ್ವನ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಮಣಿಪುರ ಪೊಲೀಸ್ನ 12 ತಂಡಗಳು ಕಾರ್ಯಾಚರಣೆಗೆ ಇಳಿದಿವೆ. ಅಲ್ಲದೆ ಓರ್ವ ಆರೋಪಿಯನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು 32 ವರ್ಷದ ಖುಯಿರೆಮ್ ಹೆರೊದಾಸ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿ ಪ್ರಕರಣ ದಾಖಲಿಸಲಾಗಿದೆ. ಇತರ ಆರೋಪಿಗಳ ಕುರಿತು ಆತನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಪೊಲೀಸರೇ ನಮ್ಮನ್ನು ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು’’
ಪೊಲೀಸರೇ ನಮ್ಮನ್ನು ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು ಎಂದು ಸಂತ್ರಸ್ತೆಯೋರ್ವರು ಹೇಳಿದ್ದಾರೆ. ದುಷ್ಕರ್ಮಿಗಳು ನಮ್ಮನ್ನು ಎಳೆದೊಯ್ಯುತ್ತಿರುವಾಗ ಅಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಅವರೇ ನಮ್ನನ್ನು ಜನಸಮೂಹಕ್ಕೆ ಒಪ್ಪಿಸಿ ಹೋದರು 20 ವರ್ಷದ ಸಂತ್ರಸ್ತ ಮಹಿಳೆ ಹೇಳಿದ್ದಾರೆ. ತನ್ನ ತಂದೆ ಹಾಗೂ ಸಹೋದರನನ್ನೂ ಇದೇ ದುಷ್ಕರ್ಮಿಗಳ ಗುಂಪು ಕೊಂದು ಹಾಕಿದೆ. ನಮ್ಮನ್ನು ಬೆತ್ತಲೆ ಮಾಡಿ ಎಳೆದೊಯ್ದು ಅತ್ಯಾಚಾರ ನಡೆಸಿದೆ. ಅನಂತರ ನಾವು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿ ಜೀವ ಉಳಿಸಿಕೊಂಡೆವು ಎಂದು ಅವರು ಹೇಳಿದ್ದಾರೆ.
ಸ್ವಯಂ ಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ಎನ್ಸಿಡಬ್ಲು
ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಸಿಡಬ್ಲು), ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ವರಿಷ್ಠರಿಗೆ ನಿರ್ದೇಶಿಸಿದೆ. ‘‘ಎನ್ಸಿಡಬ್ಲು ಮಣಿಪುರದ ಈ ಘಟನೆಯನ್ನು ಖಂಡಿಸುತ್ತದೆ. ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದೆ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮಣಿಪುರದ ಡಿಜಿಪಿಯವರಿಗೆ ಸೂಚಿಸಿದೆೆ’’ ಎಂದು ಎನ್ಸಿಡಬ್ಲು ಟ್ವೀಟ್ನಲ್ಲಿ ಹೇಳಿದೆ.
ಆರೋಪಿಗಳಿಗೆ ಮರಣದಂಡನೆ ವಿಧಿಸಲು ಚಿಂತನೆ: ಸಿಎಂ ಬಿರೇನ್ ಸಿಂಗ್ ಘಟನೆಯ ಕುರಿತು ಕೂಲಂಕಷ ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಮ್ಮ ಸಮಾಜದಲ್ಲಿ ಇಂತಹ ಹೇಯ ಕೃತ್ಯಕ್ಕೆ ಯಾವುದೇ ಅವಕಾಶ ಇಲ್ಲ ಎಂಬುದನ್ನು ಎಲ್ಲರೂ ತಿಳಿಯಲಿ ಎಂದು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದಾರೆ.
ವೀಡಿಯೊ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಕೇಂದ್ರ ಸೂಚನೆ
ಈ ಘಟನೆಯ ವೀಡಿಯೊವನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರ ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮದ ವೇದಿಕೆಗಳಿಗೆ ಸೂಚಿಸಿದೆ. ವೀಡಿಯೊದ ಅಂಶ ಪ್ರಚೋದನಕಾರಿಯಾಗಿರುವುದರಿಂದ ಇದು ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ಮತ್ತಷ್ಟು ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಸರಕಾರದ ಅನಾಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರಕ್ಕೆ ನಕಲಿ ಸುದ್ದಿ ಕಾರಣ ಮೈತೈ ಸಮುದಾಯಕ್ಕೆ ಸೇರಿದ ದುಷ್ಕರ್ಮಿಗಳು ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿ, ಅತ್ಯಾಚಾರ ಎಸಗಿರುವುದಕ್ಕೆ ನಕಲಿ ವೀಡಿಯೊ ಕಾರಣ ಎಂಬುದು ಈಗ ಬೆಳಕಿಗೆ ಬಂದಿದೆ.
ಇನ್ನೊಂದು ಲೈಂಗಿಕ ಕಿರುಕುಳದ ಘಟನೆಯ ನಕಲಿ ವೀಡಿಯೊದ ಹಿನ್ನಲೆಯಲ್ಲಿ ಪ್ರತೀಕಾರವಾಗಿ ದುಷ್ಕರ್ಮಿಗಳ ಗುಂಪು ಈ ಕೃತ್ಯ ಎಸಗಿದೆ ಎಂದು ತಿಳಿದು ಬಂದಿದೆ. ತಮ್ಮ ಹಾಗೂ ಕುಕಿ ಬುಡಕಟ್ಟು ಸಮುದಾಯದ ನಡುವೆ ಭುಗಿಲೆದ್ದ ಹಿಂಸಾಚಾರ ಹಾಗೂ ಪ್ರತಿಭಟನೆಯ ನಡುವೆ ತಮ್ಮ ಸಮುದಾಯಕ್ಕೆ ಸೇರಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಹಾಗೂ ಹತ್ಯೆಗೈಯಲಾಗಿದೆ ಎಂದು ಆರೋಪಿಸಿದ ನಕಲಿ ವೀಡಿಯೊ ಮಣಿಪುರದಲ್ಲಿ ವ್ಯಾಪಕವಾಗಿ ಶೇರ್ ಆದ ಬಳಿಕ ಮೈತೈ ಬುಡಕಟ್ಟು ಸಮುದಾಯದ ಜನರು ಆಕ್ರೋಶಿತರಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ಸಾಮೂಹಿಕ ಅತ್ಯಾಚಾರದ ನಕಲಿ ಸುದ್ದಿಗಳಿಂದ ಆಕ್ರೋಶಿತರಾದ ಮೈತ್ರೈ ಸಮುದಾಯಕ್ಕೆ ಸೇರಿದ ನೂರಾರು ಜನರ ಗುಂಪು ದಾಳಿ ನಡೆಸಿದ ಸಂದರ್ಭ ಇಬ್ಬರು ಮಧ್ಯವಯಸ್ಸಿನ ಮಹಿಳೆಯರು, ತಂದೆ ಹಾಗೂ ಅವರ ಪುತ್ರ, ಪುತ್ರಿಯನ್ನು ಒಳಗೊಂಡ ಐವರ ಗುಂಪು ಅರಣ್ಯದ ಗುಡ್ಡಗಾಡು ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿತ್ತು. ಮೈತೈ ಸಮುದಾಯದ ಗುಂಪು ಇವರೊಂದಿಗೆ ಜಗಳಕ್ಕಿಯಿತು. ಅಲ್ಲದೆ, ಸಂತ್ರತಸ್ತ ಮಹಿಳೆಯ ಓರ್ವ ಸಹೋದರನ್ನು ಹತ್ಯೆಗೈದಿತು. ಅನಂತರ ಈ ಇಬ್ಬರು ಮಹಿಳೆಯರನ್ನು ಎಳೆದುಕೊಂಡು ಬೆತ್ತಲೆಗೊಳಿಸಿತ್ತು. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿತ್ತು.