ಪೂಜಾ ಖೇಡ್ಕರ್ ಅಂಗವೈಕಲ್ಯ ಪ್ರಮಾಣ ಪತ್ರಗಳ ಪೈಕಿ ಒಂದು ಫೋರ್ಜರಿ ಆಗಿರುವ ಸಾಧ್ಯತೆ : ಪೊಲೀಸ್
ಪೂಜಾ ಖೇಡ್ಕರ್ | PC : PTI
ಹೊಸದಿಲ್ಲಿ: ತಮಗೆ ಬಹು ಅಂಗವೈಕಲ್ಯ ಇದೆ ಎಂದು ತೋರಿಸಿಕೊಳ್ಳಲು ಮಾಜಿ ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎರಡು ಅಂಗವೈಕಲ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದು, ಈ ಪೈಕಿ ಒಂದು ಪ್ರಮಾಣ ಪತ್ರವನ್ನು ಫೋರ್ಜರಿ ಮತ್ತು ತಿರುಚಿರುವ ಸಾಧ್ಯತೆ ಇದೆ ಎಂದು ತನಿಖೆಯಲ್ಲಿ ಕಂಡು ಬಂದಿದೆ ಎಂದು ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ.
ವಂಚನೆ ಎಸಗಿ, ತಪ್ಪು ದಾರಿಯ ಮೂಲಕ ಇತರೆ ಹಿಂದುಳಿದ ವರ್ಗಗಳ ಪ್ರಮಾಣ ಪತ್ರ ಹಾಗೂ ಅಂಗವೈಕಲ್ಯ ಮೀಸಲಾತಿಯ ಲಾಭ ಪಡೆದ ಆರೋಪವನ್ನು ಎದುರಿಸುತ್ತಿರುವ ಪೂಜಾ ಖೇಡ್ಕರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಪ್ರತಿಯಾಗಿ ಪೊಲೀಸರು ಈ ಹೇಳಿಕೆಯನ್ನು ಸಲ್ಲಿಸಿದ್ದಾರೆ.
2022ರ ನಾಗರಿಕ ಸೇವಾ ಪರೀಕ್ಷೆಗಳು ಹಾಗೂ 2023ರ ನಾಗರಿಕ ಸೇವಾ ಪರೀಕ್ಷೆಗಳಿಗೆ ಕ್ರಮವಾಗಿ ಎರಡು ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಪೂಜಾ ಕೇಡ್ಕರ್ ಸಲ್ಲಿಸಿದ್ದಾರೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
ಪರಿಶೀಲನೆಯ ನಂತರ, ಲೋಕೋಮೋಟರ್ ಅಂಗವೈಕಲ್ಯ, ಶಬ್ದಗ್ರಹಣ ಮಾಂದ್ಯತೆ ಹಾಗೂ ದೃಷ್ಟಿ ಮಾಂದ್ಯತೆಯ ಪ್ರಮಾಣ ಪತ್ರವನ್ನು ನಾಗರಿಕ ಶಸ್ತ್ರಚಿಕಿತ್ಸಕ ಕಚೇರಿ ದಾಖಲೆಗಳ ಪ್ರಕಾರ ವಿತರಿಸಲಾಗಿಲ್ಲ ಎಂದು ಪ್ರಮಾಣ ಪತ್ರ ವಿತರಿಸುವ ಮಹಾರಾಷ್ಟ್ರದ ಅಹ್ಮದ್ ನಗರ್ ನ ವೈದ್ಯಕೀಯ ಪ್ರಾಧಿಕಾರ ಹೇಳಿದೆ ಹಾಗೂ ಈ ಪ್ರಮಾಣ ಪತ್ರವನ್ನು ಬಹುಶಃ ಫೋರ್ಜರಿ ಮಾಡಿರುವ ಹಾಗೂ ತಿರುಚಿರುವ ಸಾಧ್ಯತೆ ಅಧಿಕವಿದೆ ಎಂದು ವಸ್ತುಸ್ಥಿತಿ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ.