ಸಾರ್ವಜನಿಕರಿಗೆ ವಂಚನೆ ಎಸಗಿದ ಪೂಜಾ ಖೇಡ್ಕರ್ : ದಿಲ್ಲಿ ಹೈಕೋರ್ಟ್ ಗೆ ತಿಳಿಸಿದ ಯು ಪಿ ಎಸ್ ಸಿ

ಪೂಜಾ ಖೇಡ್ಕರ್ | Credit: X/@DDNewslive
ಹೊಸದಿಲ್ಲಿ: ಮಾಜಿ ತರಬೇತಿನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ ಸಿ), ಪೂಜಾ ಖೇಡ್ಕರ್ ವಂಚಕ ಮಾರ್ಗ ಹಾಗೂ ತಪ್ಪಾಗಿ ಇತರೆ ಹಿಂದುಳಿದ ವರ್ಗಗಳು ಹಾಗೂ ಅಂಗವೈಕಲ್ಯ ಮೀಸಲಾತಿಯ ಲಾಭವನ್ನು ಪಡೆಯುವ ಮೂಲಕ, ಅವರು ಆಯೋಗ ಹಾಗೂ ಸಾರ್ವಜನಿಕರಿಗೆ ವಂಚನೆ ಎಸಗಿದ್ದಾರೆ ಎಂದು ವಾದಿಸಿತು.
ಪೂಜಾ ಖೇಡ್ಕರ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದರಿಂದ ಆಳವಾದ ಪಿತೂರಿ ಹೊಂದಿರುವ ಈ ಪ್ರಕರಣದಲ್ಲಿನ ನಮ್ಮ ತನಿಖೆಗೆ ಅಡ್ಡಿಯಾಗಲಿದೆ ಹಾಗೂ ಸಾರ್ವಜನಿಕರ ವಿಶ್ವಾಸದ ಮೇಲೆ ವ್ಯಾಪಕ ದುಷ್ಪರಿಣಾಮ ಉಂಟಾಗಲಿದೆ. ಅಲ್ಲದೆ ನಾಗರಿಕ ಸೇವಾ ಪರೀಕ್ಷೆಗಳ ಸಮಗ್ರತೆಗೂ ಧಕ್ಕೆಯಾಗಲಿದೆ ಎಂದು ವಾದಿಸಿದ ದಿಲ್ಲಿ ಪೊಲೀಸರು, ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದ ನ್ಯಾ. ಸುಬ್ರಮೊನಿಯಮ್ ಪ್ರಸಾದ್, ಈ ನಡುವೆ, ಪೂಜಾ ಖೇಡ್ಕರ್ ಅವರಿಗೆ ಮಂಜೂರು ಮಾಡಿದ್ದ ಬಂಧನದ ವಿರುದ್ಧದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದರು.
ಯು ಪಿ ಎಸ್ ಸಿ ಹಾಗೂ ದಿಲ್ಲಿ ಪೊಲೀಸರ ನಿಲುವಿನ ಕುರಿತು ಪ್ರತಿಕ್ರಿಯಿಸಲು ಪೂಜಾ ಖೇಡ್ಕರ್ ಅವರಿಗೆ ನ್ಯಾಯಾಲಯವು ಸಮಯಾವಕಾಶ ಒದಗಿಸಿದೆ.
ಮೀಸಲಾತಿಯ ಲಾಭಗಳನ್ನು ಪಡೆಯಲು ಪೂಜಾ ಖೇಡ್ಕರ್ 2022ರ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಅರ್ಜಿಯಲ್ಲಿ ತಪ್ಪು ಮಾಹಿತಿಗಳನ್ನು ಒದಗಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.