ಪುಣೆ ಕಾರು ಅಪಘಾತ ಪ್ರಕರಣ: ಆರೋಪಿಯ ಬದಲಿಗೆ ತನ್ನ ರಕ್ತದ ಮಾದರಿ ನೀಡಿದ ತಾಯಿಯ ಬಂಧನ
PC : ANI
ಪುಣೆ: ಪೋರ್ಶೆ ಕಾರು ಢಿಕ್ಕಿ ಹೊಡೆಸಿ ಇಬ್ಬರು ಬೈಕ್ ಸವಾರರ ಸಾವಿಗೆ ಕಾರಣನಾದ 17 ವರ್ಷದ ತರುಣನ ರಕ್ತದ ಮಾದರಿಯ ಬದಲಿಗೆ ತನ್ನ ರಕ್ತದ ಮಾದರಿಯನ್ನು ನೀಡಿರುವ ಆರೋಪದಲ್ಲಿ ತರುಣನ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಮೇ 19ರಂದು ಪುಣೆಯ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕುಟುಂಬಕ್ಕೆ ಸೇರಿದ ತರುಣನು ತನ್ನ ನಂಬರ್ ಪ್ಲೇಟ್ ಇಲ್ಲದ ಪೋರ್ಶೆ ಕಾರನ್ನು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಬ್ಬರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಮೃತಪಟ್ಟಿದ್ದರು. ತರುಣನ ವಿರುದ್ಧ ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತದ ಬಳಿಕ ಸಂಗ್ರಹಿಸಲಾದ ತರುಣನ ರಕ್ತದ ಮಾದರಿಗಳನ್ನು ಸಸೂನ್ ಸರಕಾರಿ ಆಸ್ಪತ್ರೆಯ ವೈದ್ಯರು ಬದಲಸಿರುವುದು ಪತ್ತೆಯಾಗಿದೆ ಎಂದು ಮೇ 28ರಂದು ಪೊಲೀಸರು ಹೇಳಿದ್ದರು. ರಕ್ತದಲ್ಲಿನ ಆಲ್ಕೊಹಾಲ್ ಪ್ರಮಾಣವನ್ನು ಪತ್ತೆಹಚ್ಚುವುದಕ್ಕಾಗಿ ಆರೋಪಿಯ ರಕ್ತದ ಮಾದರಿಗಳನ್ನುವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಾಗ ಬೇರೆ ವ್ಯಕ್ತಿಯ ರಕ್ತದ ಮಾದರಿಗಳನ್ನು ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ರಕ್ತದ ಮಾದರಿಗಳ ಬದಲಿಗೆ ಆತನ ತಾಯಿಯ ರಕ್ತದ ಮಾದರಿಗಳನ್ನು ಕಳುಹಿಸಲಾಗಿತ್ತು ಎಂದು ಪುಣೆ ಪೊಲೀಸ್ ಕಮಿಶನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಇದಕ್ಕೂ ಮೊದಲು, 17 ವರ್ಷದ ತರುಣನ ರಕ್ತದ ಮಾದರಿಗಳನ್ನು ಬದಲಾಯಿಸಿದ ಆರೋಪದಲ್ಲಿ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯ ತಂದೆ ಮತ್ತು ಅಜ್ಜ ಕೂಡ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಆರೋಪಿಯನ್ನು ಜೂನ್ 5ರವರೆಗೆ ನಿಗಾ ಮನೆಗೆ ಕಳುಹಿಸಲಾಗಿದೆ.
ಶುಕ್ರವಾರ, ಆರೋಪಿಯನ್ನು ಎರಡು ಗಂಟೆಗಳ ಕಾಲ ಪ್ರಶ್ನಿಸಲು ಪುಣೆಯ ಬಾಲ ನ್ಯಾಯ ಮಂಡಳಿಯು ಪೊಲೀಸರಿಗೆ ಅವಕಾಶ ನೀಡಿದೆ.