ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ ಅಪ್ರಾಪ್ತ ವಯಸ್ಸಿನ ಸಹೋದರಿಯರ ಹತ್ಯೆ
ಬಾಲಕಿಯರನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಂದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಪುಣೆ: ಬುಧವಾರ ಮಧ್ಯಾಹ್ನ ರಾಜಗುರುನಗರದ ತಮ್ಮ ಮನೆಯ ಬಳಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ 8 ಮತ್ತು 9 ವರ್ಷ ವಯಸ್ಸಿನ ಇಬ್ಬರು ಬಾಲಕಿಯರು, ಅವರು ತಂಗಿದ್ದ ಕಟ್ಟಡದ ಅಡುಗೆಯವನ ಕೋಣೆಯಲ್ಲಿರುವ ನೀರಿನ ಡ್ರಮ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಪೊಲೀಸರ ತಂಡವು ರಾಜಗುರುನಗರದಿಂದ 45 ಕಿ.ಮೀ ದೂರದಲ್ಲಿರುವ ಪುಣೆಯ ಲಾಡ್ಜ್ ಒಂದರಿಂದ ಅಡುಗೆಯವನನ್ನು ಬಂಧಿಸಿದೆ.
"ಆರೋಪಿ ಪಶ್ಚಿಮ ಬಂಗಾಳದ ತನ್ನ ಊರಿಗೆ ಪರಾರಿಯಾಗಲು ಸಿದ್ಧತೆ ನಡೆಸುತ್ತಿರುವಾಗ ಆತನನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಆತ ಪುಣೆಯಿಂದ ತನ್ನೂರಿಗೆ ತೆರಳಲು ಸಿದ್ಧವಾಗಿದ್ದ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಪುಣೆ ಗ್ರಾಮೀಣ) ರಮೇಶ್ ಚೋಪಡೆ ಅವರು ತಿಳಿಸಿದ್ದಾರೆ.
ಪೊಲೀಸರ ಆರಂಭಿಕ ವಿಚಾರಣೆ ವೇಳೆ, ಅಡುಗೆಯವನು ಸ್ಥಳದಿಂದ ಹೊರಡುವ ಮುನ್ನ ಇಬ್ಬರು ಹುಡುಗಿಯರನ್ನು ಡ್ರಮ್ನಲ್ಲಿ ಮುಳುಗಿಸಿ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಾಲಕಿಯರಲ್ಲಿ ಒಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾಗಿಯೂ ಆತ ಒಪ್ಪಿಕೊಂಡಿದ್ದಾನೆ ಎಂದು ಚೋಪ್ಡೆ ಹೇಳಿದರು.
ಬಾಲಕಿಯರು ಕಟ್ಟಡದ ನೆಲ ಮಹಡಿಯಲ್ಲಿರುವ ತಮ್ಮ ಬಾಡಿಗೆ ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು.
ಅದೇ ಕಟ್ಟಡದಲ್ಲಿ, ತನ್ನ ಕೆಲವು ಇತರ ಸಿಬ್ಬಂದಿಯೊಂದಿಗೆ ಅಡುಗೆಯವನು ಮೊದಲ ಮಹಡಿಯ ಬಾಡಿಗೆ ಕೋಣೆಯಲ್ಲಿ ಉಳಿದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಐದು ದಿನಗಳ ಹಿಂದೆಯಷ್ಟೇ, ಉಳಿದ ಸಿಬ್ಬಂದಿಗಳು ಬಂಗಾಳದಲ್ಲಿರುವ ತಮ್ಮ ಊರಿಗೆ ತೆರಳಿದ್ದರು. ಬಳಿಕ, ಆರೋಪಿ ತನ್ನ ಕೋಣೆಯಲ್ಲಿ ಒಬ್ಬಂಟಿಯಾಗಿದ್ದನು. ಕಳೆದ ಕೆಲವು ವರ್ಷಗಳಿಂದ ಅಡುಗೆಯವರು ಅಲ್ಲಿಯೇ ವಾಸಿಸುತ್ತಿದ್ದರಿಂದ, ಬಾಲಕಿಯರು ಮತ್ತು ಕುಟುಂಬಕ್ಕೆ ಅವರನ್ನು ಚೆನ್ನಾಗಿ ತಿಳಿದಿತ್ತು ಎಂದು ಚೋಪ್ಡೆ ಹೇಳಿದರು.
ಆರೋಪಿ ಇಬ್ಬರು ಸಹೋದರಿಯರನ್ನು 'ಲಡ್ಡು' ಕೊಡುವ ನೆಪದಲ್ಲಿ ತನ್ನ ಕೋಣೆಗೆ ಕರೆಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಾಲಕಿಯರು ಆತನ ಕೋಣೆಗೆ ಕಾಲಿಟ್ಟಾಗ, ಆತ ದೊಡ್ಡ ಹುಡುಗಿಯನ್ನು ಶೌಚಾಲಯಕ್ಕೆ ತಳ್ಳಿ ಹೊರಗಿನಿಂದ ಚಿಲಕ ಹಾಕಿದನು. ಇದನ್ನು ಕಂಡ ತಂಗಿ ಕಿರುಚಲು ಪ್ರಾರಂಭಿಸಿದ್ದಾಳೆ. ಬಳಿಕ, ಆರೋಪಿ ಪೈಪ್ ಎತ್ತಿ ಅವಳ ತಲೆಗೆ ಹೊಡೆದನು. ನಂತರ ಅವಳನ್ನು ನೀರಿನ ಡ್ರಮ್ಗೆ ಎಳೆದುಕೊಂಡು ಹೋಗಿ ಅವಳು ಸಾಯುವವರೆಗೂ ಅವಳ ತಲೆಯನ್ನು ಅದರಲ್ಲಿ ಮುಳುಗಿಸಿದ್ದಾನೆ. ತಂಗಿಯ ಮರಣದ ನಂತರ, ಹಿರಿಯ ಬಾಲಕಿಯನ್ನು ಶೌಚಾಲಯದಿಂದ ಹೊರಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆದರೆ, ಆಕೆ ಕೂಡ ಕಿರುಚಲು ಪ್ರಾರಂಭಿಸಿದಾಗ ಆಕೆಯನ್ನೂ ಅದೇ ಡ್ರಮ್ನಲ್ಲಿ ಮುಳುಗಿಸಿ ಕೊಂದಿದ್ದಾನೆ. ಬಳಿಕ, ಡ್ರಮ್ ಅನ್ನು ಬಟ್ಟೆಯಿಂದ ಮುಚ್ಚಿ ಕೋಣೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.