ಸಾವರ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ : ರಾಹುಲ್ ಗಾಂಧಿಗೆ ಜಾಮೀನು ಮಂಜೂರು
Photo | NDTV
ಪುಣೆ: ವಿ ಡಿ ಸಾವರ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಪುಣೆಯ ವಿಶೇಷ ನ್ಯಾಯಾಲಯವು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದು, ಅವರಿಗೆ 25,000 ರೂ.ಗಳ ಶ್ಯೂರಿಟಿ ಬಾಂಡ್ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗುವ ಪ್ರಕ್ರಿಯೆಯಿಂದ ರಾಹುಲ್ ಗಾಂಧಿಗೆ ನ್ಯಾಯಾಲಯ ವಿನಾಯಿತಿ ನೀಡಿದೆ ಎಂದು ರಾಹುಲ್ ಪರ ವಕೀಲ ಮಿಲಿಂದ್ ಪವಾರ್ ತಿಳಿಸಿದರು. ಸಾವರ್ಕರ್ ಅವರ ಮೊಮ್ಮಗ ದಾಖಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣದ ಮುಂದಿನ ವಿಚಾರಣೆ ಫೆಬ್ರುವರಿ 18ಕ್ಕೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
2023ರ ಮಾರ್ಚ್ ನಲ್ಲಿ ರಾಹುಲ್ ಗಾಂಧಿ ಅವರು ಲಂಡನ್ ನಲ್ಲಿ ಮಾಡಿದ್ದ ಭಾಷಣದಲ್ಲಿ ವಿ.ಡಿ. ಸಾವರ್ಕರ್ ಅವರು ತಮ್ಮ ಐದಾರು ಸ್ನೇಹಿತರೊಂದಿಗೆ ಸೇರಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಸಂತಸಪಟ್ಟಿದ್ದರು ಎಂದು ಪುಸಕ್ತದಲ್ಲಿ ಬರೆದುಕೊಂಡಿದ್ದರು ಎಂದು ಹೇಳಿದ್ದಾರೆ, ಆದರೆ ಇಂತಹ ಅಂಶಗಳನ್ನು ಎಲ್ಲೂ ಪುಸ್ತಕದಲ್ಲಿ ಬರೆದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.