ಬಿಸಿ ಎಣ್ಣೆ ಸುರಿದು ವಿದ್ಯಾರ್ಥಿಗಳಿಗೆ ಶಿಕ್ಷೆ, ಶಿಕ್ಷಕರ ಅಮಾನತು
Photo: TOI
ರಾಯಪುರ: ಛತ್ತೀಸ್ ಗಢದ ಬಸ್ತರ್ ವಿಭಾಗದ ಕೊಂಡಗಾಂವ್ ಗ್ರಾಮದ ಸರ್ಕಾರಿ ಶಾಲೆಯೊಂದರ 25 ಮಕ್ಕಳಿಗೆ ಬಲವಂತವಾಗಿ ಬಿಸಿ ಎಣ್ಣೆ ಸುರಿದು ಮಕ್ಕಳು ಪರಸ್ಪರರ ಅಂಗೈಗೆ ಬಿಸಿ ಎಣ್ಣೆಯಿಂದ ಸುಟ್ಟುಕೊಳ್ಳುವಂತೆ ಶಿಕ್ಷಿಸಿದ ಭಯಾನಕ ಘಟನೆ ವರದಿಯಾಗಿದೆ. ವಿದ್ಯಾರ್ಥಿನಿಯೊಬ್ಬಳು ಶೌಚಾಲಯದ ಹೊರಗೆ ಮಲ ವಿಸರ್ಜನೆ ಮಾಡಿದ ಕಾರಣಕ್ಕೆ ಈ ಶಿಕ್ಷೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬರ್ಬರ ಕೃತ್ಯ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ ಘಟನೆ ಬಗ್ಗೆ ವಿಚಾರಣೆಗೆ ಆದೇಶ ನೀಡಿದೆ. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಇತರ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಗಿದೆ. ಘಟನೆಯ ಸಂತ್ರಸ್ತ ಮಕ್ಕಳು 11-12 ವರ್ಷದವರು ಎನ್ನಲಾಗಿದ್ದು, ಅಂಗೈಯಲ್ಲಿ ಸುಟ್ಟ ಗುಳ್ಳೆಗಳಾಗಿವೆ. ವಿಚಿತ್ರವೆಂದರೆ ಕೊಂಡಗಾಂವ್ ಜಿಲ್ಲಾ ಶಿಕ್ಷಣಾಧಿಕಾರಿ ಮಧುಲಿಕಾ ತಿವಾರಿ, ಎಣ್ಣೆ ಅಷ್ಟೊಂದು ಬಿಸಿ ಇರಲಿಲ್ಲ ಎಂಬ ಸಬೂಬು ನೀಡಿ 25 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಊಟದ ವೇಳೆ, ಶಿಕ್ಷಕರು ಊಟಕ್ಕೆ ತೆರಳಿದ್ದರು. ಅವರು ಮರಳಿದಾಗ, ಯಾರೋ ವಿದ್ಯಾರ್ಥಿಗಳು ಶೌಚಾಲಯದ ಹೊರಗೆ ವಿಸರ್ಜಿಸಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ ಯಾರೂ ಒಪ್ಪಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಶಿಕ್ಷೆಗೆ ಶಿಕ್ಷಕರು ಮುಂದಾದರು. ಮಧ್ಯಾಹ್ನದ ಬಿಸಿಯೂಟದ ಅಡುಗೆಮನೆಯಿಂದ ಬಿಸಿ ಎಣ್ಣೆ ತಂದು, ಪರಸ್ಪರರ ಕೈಗೆ ಎಣ್ಣೆ ಸುರಿಯುವಂತೆ ಬಲವಂತಪಡಿಸಿದರು ಎಂದು ಹೇಳಲಾಗಿದೆ.
ಈ ಕರಾಳ ಶಿಕ್ಷೆಯ ಬಗ್ಗೆ ಕೆಲವರು ವಿಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾರೆ. ಇದು ಅಧಿಕಾರಿಗಳಿಗೆ ತಲುಪಿದೆ. ತಕ್ಷಣ ಶಾಲೆಗೆ ತನಿಖಾ ತಂಡ ಕಳುಹಿಸಲಾಗಿದೆ ಎಂದು ತಾಲೂಕು ಶಿಕ್ಷಣ ಸಂಪನ್ಮೂಲ ಅಧಿಕಾರಿ ತಾಹಿರ್ ಖಾನ್ ಹೇಳಿದ್ದಾರೆ. ಐದು ಮಕ್ಕಳ ಅಂಗೈನಲ್ಲಿ ಸುಟ್ಟ ಗುಳ್ಳೆಗಳು ಎದ್ದಿವೆ ಎಂದು ಮಧುಲಿಕಾ ತಿವಾರಿ ಸ್ಪಷ್ಟಪಡಿಸಿದ್ದಾರೆ.