ಪಂಜಾಬ್ ಗಡಿಯಲ್ಲಿ ಈ ವರ್ಷ 200ಕ್ಕೂ ಅಧಿಕ ಡ್ರೋನ್ಗಳ ವಶ : ಬಿಎಸ್ಎಫ್
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ : ಪಂಜಾಬ್ನ ಅಂತರ ರಾಷ್ಟ್ರೀಯ ಗಡಿಯಲ್ಲಿ ಈ ವರ್ಷ 200ಕ್ಕೂ ಅಧಿಕ ಡ್ರೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ರವಿವಾರ ತಿಳಿಸಿದೆ.
ಪಾಕಿಸ್ತಾನಿ ಗುಂಪು ಯುವಕರಲ್ಲಿ ಮಾದಕ ದ್ರವ್ಯದ ಚಟವನ್ನು ಪ್ರಚೋದಿಸುವ ಹಾಗೂ ಸಾಮಾಜಿಕ ಸಾಮರಸ್ಯವನ್ನು ವಿಘಟಿತಗೊಳಿಸುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಮಾದಕ ದ್ರವ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ಡ್ರೋನ್ಗಳ ಮೂಲಕ ರವಾನಿಸುವ ಉದ್ದೇಶವನ್ನು ಹೊಂದಿದೆ. ಆದುದರಿಂದ ಈ ವರ್ಷ ದ್ವಿಗುಣ ಸಂಖ್ಯೆಯಲ್ಲಿ ಡ್ರೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಮತ್ತೆ 4 ಡ್ರೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಗಡಿಯಲ್ಲಿ ವಶಪಡಿಸಿಕೊಂಡ ಪಾಕಿಸ್ತಾನ ಮೂಲದ ಡ್ರೋನ್ಗಳ ಸಂಖ್ಯೆ 200ನ್ನು ಮೀರಿವೆ ಎಂದು ಬಿಎಸ್ಎಫ್ ಶನಿವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ವಶಪಡಿಸಿಕೊಂಡ ಡ್ರೋನ್ಗಳ ಸಂಖ್ಯೆ ದ್ವಿಗುಣಗೊಂಡಿದೆ. ಇದು ಗಮನಾರ್ಹ ಮೈಲುಗಲ್ಲು ಹಾಗೂ ನಮ್ಮ ಸಾಧನೆ. ಇದು ಗಡಿ ಭದ್ರತಾ ಪಡೆ ಗಡಿಯಲ್ಲಿ ಡ್ರೋನ್ ವಿರೋಧಿ ಕಾರ್ಯತಂತ್ರವನ್ನು ವರ್ಧಿಸಿರುವುದು ಹಾಗೂ ಸುಧಾರಿತ ತಾಂತ್ರಿಕ ಪ್ರತಿರೋಧ ವ್ಯವಸ್ಥೆಯನ್ನು ರೂಪಿಸಿರುವುದನ್ನು ಪ್ರತಿಬಿಂಬಿಸಿದೆ.
ಈ ವರ್ಷ 200ಕ್ಕೂ ಅಧಿಕ ಡ್ರೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಭದ್ರತಾ ಪಡೆ ರೈಫಲ್ ಬಳಸಿ ಗುಂಡು ಹಾರಿಸಿ ಪತನಗೊಳಿಸಿದ, ಡ್ರೋನ್ ವಿರೋಧಿ ತಂತ್ರಜ್ಞಾನ ಬಳಸಿ ಹಾರಾಟವನ್ನು ಸ್ಥಗಿತಗೊಳಿಸಿದ, ಗುಪ್ತಚರರು ಅಥವಾ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಹೊಲಗಳಲ್ಲಿ ಪತ್ತೆಯಾದ ಡ್ರೋನ್ಗಳು ಒಳಗೊಂಡಿವೆ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ಡ್ರೋನ್ಗಳಲ್ಲಿ ಹೆಚ್ಚಿನವು ಚೀನಾ ನಿರ್ಮಿತ. ಈ ಡ್ರೋನ್ಗಳು ಮಾದಕ ದ್ರವ್ಯ, ಸಣ್ಣ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಸಾಗಿಸುತ್ತಿದ್ದುವು. ಆದರೆ, ಶಸ್ತ್ರಾಸ್ತ, ಸ್ಫೋಟಕಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.
ಈ ಡ್ರೋನ್ ಅಪಾಯವು 2019-20ರಲ್ಲಿ ಆರಂಭವಾಗಿತ್ತು. ಈಗ ಪಂಜಾಬ್ನ ಅಮೃತಸರ, ತಾರನ್ ತರಣ್ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ಈ ರೀತಿ ಬೆದರಿಕೆ ಒಡ್ಡುವುದು ವ್ಯಾಪಕವಾಗಿದೆ ಎಂದು ಅವರು ತಿಳಿಸಿದ್ದಾರೆ.