ಪಂಜಾಬ್ : ಶಂಭುವಿನಲ್ಲಿ ನಾಲ್ಕನೇ ದಿನವೂ ಹಳಿಗಳಲ್ಲಿ ಧರಣಿ ಕುಳಿತ ರೈತರ ಧರಣಿ, 54 ರೈಲುಗಳು ರದ್ದು
PC : PTI
ಅಂಬಾಲಾ : ಪಂಜಾಬಿನ ಪಟಿಯಾಳಾ ಜಿಲ್ಲೆಯ ಶಂಭು ರೈಲು ನಿಲ್ದಾಣದಲ್ಲಿ ನಾಲ್ಕನೇ ದಿನವಾದ ಶನಿವಾರವೂ ರೈತರು ಹಳಿಗಳ ಮೇಲೆ ಧರಣಿ ಕುಳಿತಿದ್ದರಿಂದ ಅಂಬಾಲಾ-ಅಮೃತಸರ ಮಾರ್ಗದ ಒಟ್ಟು 54 ರೈಲುಗಳನ್ನು ರದ್ದುಗೊಳಿಸಲಾಯಿತು.
ಹಾಲಿ ನಡೆಯುತ್ತಿರುವ ಮುಷ್ಕರದ ಸಂದರ್ಭ ಹರ್ಯಾಣ ಪೋಲಿಸರಿಂದ ಬಂಧಿತರಾಗಿರುವ ಮೂವರು ರೈತರ ಬಿಡುಗಡೆಗಾಗಿ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಶನಿವಾರ 54 ರೈಲುಗಳನ್ನು ರದ್ದುಗೊಳಿಸಲಾಗಿದೆ. ಕಳೆದ ಮೂರು ದಿನಗಳಲ್ಲಿ ರೈತರ ಪ್ರತಿಭಟನೆಯಿಂದ 380 ರೈಲುಗಳ ಸಂಚಾರಕ್ಕೆ ತೊಂದರೆಯಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲವನ್ನುಂಟು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ರೈತರು ಶಂಭುವಿನಲ್ಲಿ ಸಂಯುಕ್ತ ಕಿಸಾನ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೂವರು ರೈತರ ಬಿಡುಗಡೆಯವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ನಾಯಕ ಸರ್ವನ್ ಸಿಂಗ್ ಪಂಧೇರ್ ತಿಳಿಸಿದರು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಮೇಲೆ ಒತ್ತಡ ಹೇರಲು ರೈತರು ಹಮ್ಮಿಕೊಂಡಿದ್ದ ’ದಿಲ್ಲಿ ಚಲೋ’ ಆಂದೋಲನವನ್ನು ಫೆ.13ರಂದು ಭದ್ರತಾ ಪಡೆಗಳು ತಡೆದಾಗಿನಿಂದಲೂ ರೈತರು ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದಾರೆ.