ಉಕ್ರೇನಿಯನ್ ಪ್ರದೇಶದ ಸ್ವಾಧೀನ ಸಮರ್ಥಿಸಿಕೊಂಡ ಪುಟಿನ್
ವ್ಲಾದಿಮಿರ್ ಪುಟಿನ್ | Photo : PTI
ಮಾಸ್ಕೊ : ಒಂದು ವರ್ಷದ ಹಿಂದೆ ರಶ್ಯವು ಸ್ವಾಧೀನಪಡಿಸಿಕೊಂಡಿರುವ ಉಕ್ರೇನಿಯನ್ ಪ್ರದೇಶದ ನಿವಾಸಿಗಳು ತಮ್ಮ ಪಿತೃಭೂಮಿಯೊಂದಿಗೆ ಇರಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಡೊನೆಟ್ಸ್ಕ್, ಲುಹಾಂಸ್ಕ್, ಝಪೋರಿಝಿಯಾ ಮತ್ತು ಖೆರ್ಸಾನ್ ಪ್ರಾಂತಗಳನ್ನು ಸ್ವಾಧೀನಪಡಿಸಿಕೊಂಡು ಒಂದು ವರ್ಷವಾದ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪುಟಿನ್ ‘ ಈ ನಾಲ್ಕೂ ಪ್ರಾಂತಗಳ ಸ್ವಾಧೀನ ಕಾರ್ಯಾಚರಣೆ ಅಂತರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ನಡೆದಿದೆ. ಈ ತಿಂಗಳಾರಂಭದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಈ ಪ್ರಾಂತದ ಜನತೆ ರಶ್ಯದ ಭಾಗವಾಗಿರಲು ಇಚ್ಛೆ ವ್ಯಕ್ತಪಡಿಸಿದ್ದಾರೆ’ ಎಂದರು. ಈ ಚುನಾವಣೆಯಲ್ಲಿ ಪುಟಿನ್ ಗೆ ನಿಷ್ಟವಾಗಿರುವ ಪಕ್ಷ ಗೆಲುವು ಸಾಧಿಸಿರುವುದಾಗಿ ರಶ್ಯದ ಚುನಾವಣಾ ಆಯೋಗ ಘೋಷಿಸಿತ್ತು.
ಈ ನಾಲ್ಕು ಪ್ರಾಂತಗಳಲ್ಲಿ ಕಳೆದ ವಷಾಂತ್ಯ ರಶ್ಯ ನಡೆಸಿದ್ದ ಜನಮತ ಸಂಗ್ರಹ ಹಾಗೂ ಈ ತಿಂಗಳಾರಂಭದಲ್ಲಿ ನಡೆಸಿದ್ದ ಸ್ಥಳೀಯ ಚುನಾವಣೆ ಅಕ್ರಮವಾಗಿದ್ದು ಇದನ್ನು ಮಾನ್ಯ ಮಾಡುವುದಿಲ್ಲ ಎಂದು ಪಾಶ್ಚಿಮಾತ್ಯ ದೇಶಗಳು ಖಂಡಿಸಿವೆ.
ಈ ಮಧ್ಯೆ, ಶುಕ್ರವಾರ ರಾತ್ರಿ ಒಡೆಸಾ, ಮಿಕೊಲಾಯಿವ್ ಮತ್ತು ವಿನಿಟ್ಸಿಯ ಪ್ರಾಂತವನ್ನು ಗುರಿಯಾಗಿಸಿದ 40 ಡ್ರೋನ್ ದಾಳಿಗಳಲ್ಲಿ 30 ಡ್ರೋನ್ ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಸೇನೆ ಘೋಷಿಸಿದೆ.