ಅಡುಗೆಯಲ್ಲಿ ಟೊಮೆಟೊ ಬಳಕೆ ಕುರಿತು ಪತಿಯೊಂದಿಗೆ ಜಗಳ: ಮನೆ ಬಿಟ್ಟು ಹೊರಟ ಪತ್ನಿ !
ಟೊಮೆಟೊ | Photo : PTI
ಭೋಪಾಲ್: ಅಡುಗೆಯಲ್ಲಿ ಟೊಮೆಟೊ ಹಾಕುವ ವಿಚಾರದಲ್ಲಿ ಜಗಳದ ಬಳಿಕ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಧನಪುರಿಯಲ್ಲಿ ಈ ಘಟನೆ ವರದಿಯಾಗಿದೆ.
ಧನಪುರಿಯಲ್ಲಿ ಸಣ್ಣ ಢಾಭಾ ನಡೆಸುತ್ತಿರುವ ಸಂದೀಪ್ ಬರ್ಮನ್ ತನ್ನ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆಂದು ದೂರು ನೀಡಿದ್ದಾನೆ. ತನ್ನ ಟಿಫಿನ್ ಗೆ ತುಂಬಿದ ಆಹಾರಕ್ಕೆ ಎರಡು-ಮೂರು ಟೊಮೆಟೊ ಬಳಸಿದ್ದು, ಇದು ಪತ್ನಿಯ ಕೋಪಕ್ಕೆ ಕಾರಣವಾಗಿದೆ ಎಂದು ಸಂದೀಪ್ ಪೊಲೀಸರಿಗೆ ತಿಳಿಸಿದ್ದಾರೆ.
ಟೊಮೆಟೊ ಕೆಜಿಗೆ 140 ರೂ.ಗೆ ಮಾರಾಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪತಿ-ಪತ್ನಿ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ನಂತರ, ಆತನ ಹೆಂಡತಿ ಮನೆಯಿಂದ ಹೊರ ನಡೆದಿದ್ದಾಳೆ ಎಂದು ದೂರಲಾಗಿದೆ.
ಧನಪುರಿ ಪೊಲೀಸ್ ಠಾಣೆ ಅಧಿಕಾರಿ ಸಂಜಯ್ ಜೈಸ್ವಾಲ್ ಘಟನೆಯನ್ನು ಖಚಿತಪಡಿಸಿದ್ದಾರೆ. ಆಹಾರದಲ್ಲಿ ಬಳಸಲಾದ ಟೊಮೆಟೊಗಳ ಬಗ್ಗೆ ನಡೆದ ಜಗಳದ ಬಳಿಕ ಪತ್ನಿ ತಮ್ಮ ಅಪ್ರಾಪ್ತ ಮಗಳೊಂದಿಗೆ ತಮ್ಮ ಮನೆಯನ್ನು ತೊರೆದಿದ್ದಾರೆ ಎಂದು ಪತಿ ದೂರು ನೀಡಿದ್ದಾರೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಪೊಲೀಸರು ಸಮಾಲೋಚನೆ ನಡೆಸಿದ ಬಳಿಕ ಪತ್ನಿ ಮನೆಗೆ ಮರಳಲು ಒಪ್ಪಿಕೊಂಡಿದ್ದಾಳೆ ಎಂದು ಜೈಸ್ವಾಲ್ ಹೇಳಿದ್ದಾರೆ.