ರಾಹುಲ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ

ರಾಹುಲ್ ಗಾಂಧಿ | PTI
ಹೊಸದಿಲ್ಲಿ : ಲೋಕಸಭೆಯಲ್ಲಿ ಸೋಮವಾರ ಮಾಡಿದ ಭಾಷಣದಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಿರ್ಲಜ್ಜವಾಗಿ ಐತಿಹಾಸಿಕ ಹಾಗೂ ಗಣನೀಯವಾದ ವಾಸ್ತವಾಂಶಗಳನ್ನು ತಿರುಚಿದ್ದಾರೆಂದು ಆರೋಪಿಸಿ, ಅವರ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬರೆದ ಪತ್ರದಲ್ಲಿ ಗಾಂಧಿ ವಿರುದ್ಧ ಹಕ್ಕುಚ್ಯುತಿ ಕ್ರಮಗಳನ್ನು ಕೈಗೊಳ್ಳಬೇಕೆಂದು ದುಬೆ ಅವರು ಆಗ್ರಹಿಸಿದರು.‘‘ ಕಾಂಗ್ರೆಸ್ ನಾಯಕ ನಮ್ಮ ದೇಶವನ್ನು ಅಪಹಾಸ್ಯ ಮಾಡಲು ಯತ್ನಿಸುತ್ತಿದ್ದಾರೆ. ನಮ್ಮ ಗಣರಾಜ್ಯದ ಪ್ರತಿಷ್ಠೆಯನ್ನು ಕುಂದಿಸಲು ಯತ್ನಿಸುತ್ತಿದ್ದಾರೆ’’ ಎಂದು ದುಬೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿಯವರ ಭಾಷಣದ ಕುರಿತ ವಂದನಾ ನಿರ್ಣಯದ ಬಗ್ಗೆ ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ ಸಂದರ್ಭದಲ್ಲಿ ರಾಹುಲ್ ಅವರು, ಚೀನಾದ ಭೂಕಬಳಿಕೆ, ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿಯ ಅನುಪಸ್ಥಿತಿ, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸೇರಿದಂತೆ ಆರು ಪ್ರಮುಖ ವಿಷಯಗಳ ಬಗ್ಗೆ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆಂದು ದುಬೆ ಆರೋಪಿಸಿದ್ದಾರೆ.
ಭಾಷಣದಲ್ಲಿ ಮಾಡಿರುವ ಆರೋಪಗನ್ನು ದೃಢೀಕರಿಸುವಂತೆ ರಾಹುಲ್ ಗಾಂಧಿ ಅವರನ್ನು ಸ್ಪೀಕರ್ ಕೇಳಿಕೊಂಡಿದ್ದಾರೆಂದು ಬಿಜೆಪಿ ಸಂಸದರೂ ಆದ ರಾಹುಲ್ ಹೇಳಿದ್ದಾರೆ. ಆದರೆ ತನಗೆ ತಿಳಿದಂತೆ ಈ ‘ಪಾಂಡಿತ್ಯಪೂರ್ಣ’ವ್ಯಕ್ತಿಯು ಆತ ನೀಡಿದ ಅಸಂಬದ್ಧ ಹೇಳಿಕೆಗಳನ್ನು ದೃಢಪಡಿಸಿಲ್ಲ ಅಥವಾ ನಮ್ಮ ದೇಶ ಹಾಗೂ ಚುನಾಯಿತ ಸರಕಾರಕ್ಕೆ ಕೆಟ್ಟ ಹೆಸರನ್ನು ತರಲು ಲೋಕಸಭೆಯಂತಹ ಘನವೆತ್ತ ವೇದಿಕೆಯನ್ನು ಬಳಸಿಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿಲ್ಲವೆಂದು ಎಂದು ದುಬೆ ಹೇಳಿದ್ದಾರೆ.