ಅದಾನಿ ವಿಷಯ ಖಾಸಗಿಯಲ್ಲ, ಅದು ದೇಶದ್ದಾಗಿದೆ: ಅಮೆರಿಕ ಮಾಧ್ಯಮಗಳಿಗೆ ಮೋದಿ ಹೇಳಿಕೆಗೆ ರಾಹುಲ್ ತಿರುಗೇಟು

ನರೇಂದ್ರ ಮೋದಿ , ರಾಹುಲ್ ಗಾಂಧಿ | PC : NDTV
ರಾಯಬರೇಲಿ: ಅದಾನಿ ಗ್ರೂಪ್ ವಿವಾದ ಕುರಿತು ಅಮೆರಿಕದ ಮಾಧ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಶುಕ್ರವಾರ ತಿರುಗೇಟು ನೀಡಿರುವ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು, ಅದು ಖಾಸಗಿ ವಿಷಯವಲ್ಲ, ಬದಲಾಗಿ ದೇಶಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದ್ದಾರೆ.
ತನ್ನ ಸಂಸದೀಯ ಕ್ಷೇತ್ರವಾಗಿರುವ ರಾಯಬರೇಲಿಯ ಲಾಲ್ ಗಂಜ್ ಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ರಾಹುಲ್ ಹೇಳಿಕೆ ಹೊರಬಿದ್ದಿದೆ.
ಇತ್ತೀಚಿನ ಅಮೆರಿಕ ಭೇಟಿ ಸಂದರ್ಭ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದ ಮೋದಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿನ ಚರ್ಚೆಗಳು ಮತ್ತು ಅದಾನಿ ಗ್ರೂಪ್ ಕುರಿತು ವಿವಾದದ ಕುರಿತು ಪ್ರಶ್ನೆಗೆ, ಅದು ಖಾಸಗಿ ವಿಷಯವಾಗಿದೆ ಮತ್ತು ಇಬ್ಬರು ಜಾಗತಿಕ ನಾಯಕರು ಭೇಟಿಯಾದಾಗ ಇಂತಹ ಸಂಗತಿಗಳನ್ನು ಚರ್ಚಿಸುವುದಿಲ್ಲ ಎಂದು ಉತ್ತರಿಸಿದ್ದರು.
‘ನರೇಂದ್ರ ಮೋದಿಜಿ,ಇದು ಖಾಸಗಿ ವಿಷಯಯವಲ್ಲ,ಇದು ದೇಶದ ವಿಷಯ’ ಎಂದು ಶುಕ್ರವಾರ ತನ್ನ ಭಾಷಣದಲ್ಲಿ ಹೇಳಿದ ರಾಹುಲ್, ಅದಾನಿ ತನ್ನ ಸ್ನೇಹಿತರಾಗಿದ್ದಾರೆ ಮತ್ತು ಅವರ ಬಗ್ಗೆ ಟ್ರಂಪ್ ಬಳಿ ತಾನು ಏನನ್ನೂ ಕೇಳುವುದಿಲ್ಲ ಎಂದು ಮೋದಿ ಅಮೆರಿಕದ ಮಾಧ್ಯಮಗಳಿಗೆ ಹೇಳಿದ್ದರು ಎಂದು ಆರೋಪಿಸಿದರು.
‘ಅಮೆರಿಕದಲ್ಲಿ ಅದಾನಿ ವಿರುದ್ಧ ‘ಭ್ರಷ್ಟಾಚಾರ ಮತ್ತು ಕಳ್ಳತನ’ ಪ್ರಕರಣ ಬಾಕಿಯಿದೆ ಮತ್ತು ನಮ್ಮ ಪ್ರಧಾನಿ ಅದು ಖಾಸಗಿ ವಿಷಯವಾಗಿದೆ ಮತ್ತು ನಾವು ಅದನ್ನು ಚರ್ಚಿಸುವುದಿಲ್ಲ ಎಂದು ಹೇಳುತ್ತಾರೆ. ಅವರು ನಿಜವಾಗಿಯೂ ದೇಶದ ಪ್ರಧಾನಿಯಾಗಿದ್ದರೆ ಟ್ರಂಪ್ ಬಳಿ ಈ ಪ್ರಕರಣದ ಕುರಿತು ವಿಚಾರಿಸುತ್ತಿದ್ದರು ಮತ್ತು ತಾನು ಈ ಬಗ್ಗೆ ವಿಚಾರಣೆ ನಡೆಸುತ್ತೇನೆ ಹಾಗೂ ಅಗತ್ಯವಾದರೆ ವಿಚಾರಣೆಯನ್ನು ಎದುರಿಸಲು ಅದಾನಿಯನ್ನು ಅಮೆರಿಕಕ್ಕೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಅದು ಖಾಸಗಿ ವಿಷಯ ಎಂದು ಹೇಳಿ ಅವರು ಕೈತೊಳೆದುಕೊಂಡಿದ್ದರು’ ಎಂದು ರಾಹುಲ್ ಆರೋಪಿಸಿದರು.