ರಾಹುಲ್ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ ಮಾ. 6ಕ್ಕೆ ಮುಂದೂಡಿಕೆ

ರಾಹುಲ್ ಗಾಂಧಿ | PC : PTI
ಲಕ್ನೋ : ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವೊಂದು ಸೋಮವಾರ ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ರಾಯ್ಬರೇಲಿ ಸಂಸದ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ.
ದೂರುದಾರರನ್ನು ಫೆಬ್ರವರಿ 11ರಂದು ಪಾಟೀಸವಾಲಿಗೆ ಒಳಪಡಿಸಲಾಗಿದೆ ಎಂದು ರಾಹುಲ್ ಗಾಂಧಿಯ ವಕೀಲ ಕಾಶಿಪ್ರಸಾದ್ ಶುಕ್ಲಾ ತಿಳಿಸಿದರು.
ಪಾಟೀಸವಾಲು ಪೂರ್ಣಗೊಂಡ ಬಳಿಕ, ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ದೂರುದಾರರ ವಕೀಲ ಸಂತೋಷ್ ಕುಮಾರ್ ಪಾಂಡೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಲಾಯಿತು.
2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ನೀಡಿದ್ದಾರೆನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ ಇದಾಗಿದೆ. ಕರ್ನಾಟಕದ ಬಿಜೆಪಿ ರಾಜಕಾರಣಿ ಮಿಶ್ರಾ ಎಂಬವರು ಮೊಕದ್ದಮೆ ದಾಖಲಿಸಿದ್ದರು. ರಾಹುಲ್ ಗಾಂಧಿಯ ‘‘ಅಸಭ್ಯ ಹೇಳಿಕೆ’’ಯಿಂದ ತನ್ನ ಭಾವನೆಗಳಿಗೆ ಹಾನಿಯಾಗಿದೆ ಎಂದು ಮಿಶ್ರಾ ಹೇಳಿದ್ದರು.
ಹಲವಾರು ವರ್ಷಗಳಲ್ಲಿ ಈ ಪ್ರಕರಣವು ಹಲವು ಪ್ರಕ್ರಿಯೆಗಳನ್ನು ಪೂರೈಸಿದೆ. ಆದರೆ ನ್ಯಾಯಾಲಯಕ್ಕೆ ಹಾಜರಾಗುವುದನ್ನು ರಾಹುಲ್ ತಪ್ಪಿಸಿಕೊಂಡಿದ್ದರೆನ್ನಲಾಗಿದೆ. 2023 ಡಿಸೆಂಬರ್ನಲ್ಲಿ, ನ್ಯಾಯಾಲಯದಲ್ಲಿ ವಾರಂಟ್ ಬಂದ ಬಳಿಕ ಅವರು ಹಾಜರಾಗಿದ್ದರು.
2024 ಫೆಬ್ರವರಿಯಲ್ಲಿ, ನ್ಯಾಯಾಲಯದ ಸಮನ್ಸ್ಗಳಿಗೆ ಅನುಸಾರವಾಗಿ ರಾಹುಲ್ ಗಾಂಧಿ ವಿಶೇಷ ಮ್ಯಾಜಿಸ್ಟ್ರೇಟ್ರ ಸಮ್ಮುಖದಲ್ಲಿ ಹಾಜರಾದರು. ವಿಶೇಷ ಮ್ಯಾಜಿಸ್ಟ್ರೇಟರು ಅವರಿಗೆ ತಲಾ 25,000 ರೂ.ಗಳ ಎರಡು ಭದ್ರತೆಗಳ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದರು.