ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಬಿಜೆಪಿ ನಾಯಕರ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್
ರಾಹುಲ್ ಗಾಂಧಿ |PC : PTI
ಹೊಸ ದಿಲ್ಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಜೀವ ಬೆದರಿಕೆ ಅಥವಾ ದೈಹಿಕ ಹಾನಿಯೆಸಗುವ ಬೆದರಿಕೆ ಹಾಕುತ್ತಿರುವ ಆರೋಪದ ಮೇಲೆ ಬಿಜೆಪಿ ನಾಯಕರು ಹಾಗೂ ಅದರ ಮೈತ್ರಿ ಪಕ್ಷಗಳ ನಾಯಕರ ವಿರುದ್ಧ ಹೊಸದಿಲ್ಲಿಯ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಬುಧವಾರ ದೂರು ದಾಖಲಿಸಿದ್ದಾರೆ.
ತಮ್ಮ ದೂರಿನಲ್ಲಿ ಬಿಜೆಪಿ ನಾಯಕ ತರ್ವಿಂದರ್ ಸಿಂಗ್ ಮಾರ್ವಾರ ಹೇಳಿಕೆಯನ್ನು ಅಜಯ್ ಉಲ್ಲೇಖಿಸಿದ್ದಾರೆ. “ಸೆಪ್ಟೆಂಬರ್ 11, 2024ರಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕ ಮಾರ್ವಾ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಅವರು ಆ ಕಾರ್ಯಕ್ರಮದಲ್ಲಿ, “ರಾಹುಲ್ ಗಾಂಧಿ ಸರಿಯಾಗಿ ವರ್ತಿಸು, ಇಲ್ಲವಾದರೆ ನಿನ್ನ ಅಜ್ಜಿಗೆ ಆದ ಗತಿಯೇ ನಿನಗೂ ಆಗುತ್ತದೆ” ಎಂದು ಬೆದರಿಕೆ ಒಡ್ಡಿದ್ದರು” ಎಂದು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಅಲ್ಲದೆ ಶಿವಸೇನೆ(ಶಿಂದೆ ಬಣ)ಯ ಶಾಸಕ ಸಂಜಯ್ ಗಾಯಕ್ವಾಡ್ ಅವರು ಸೆಪ್ಟೆಂಬರ್ 16ರಂದು ಸಾರ್ವಜನಿಕವಾಗಿ ರಾಹುಲ್ ಗಾಂಧಿಯವರ ನಾಲಿಗೆ ಕತ್ತರಿಸುವವರಿಗೆ ರೂ. 11 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ” ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರೊಂದಿಗೆ, ಸೆಪ್ಟೆಂಬರ್ 15, 2024ರಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ರವನೀತ್ ಬಿಟ್ಟು, ರಾಹುಲ್ ಗಾಂಧಿ ಅವರನ್ನು ನಂ. 1 ಭಯೋತ್ಪಾದಕ ಎಂದು ಜರಿದಿದ್ದರು” ಎಂದೂ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದರೊಂದಿಗೆ ಇನ್ನೂ ಹಲವಾರು ಬಿಜೆಪಿ ನಾಯಕರು ರಾಹುಲ್ ಗಾಂಧಿಗೆ ಜೀವ ಬೆದರಿಕೆ ಒಡ್ಡುವಂತಹ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆದರಿಕೆ ಒಡ್ಡಿರುವ ಎಲ್ಲರಿಗೂ ಆಡಳಿತಾರೂಢ ಬಿಜೆಪಿಯೊಂದಿಗೆ ಸಾಮಾನ್ಯ ಸಂಬಂಧವಿದ್ದು, ಪರಿಚಿತ ಮತ್ತು ಅಪರಿಚಿತ ವ್ಯಕ್ತಿಗಳೊಂದಿಗೆ ಇಂತಹ ಕೃತ್ಯ ನಡೆಸಲು ವ್ಯವಸ್ಥಿತಿ ಪಿತೂರಿಯನ್ನು ನಡೆಸುತ್ತಿದ್ದಾರೆ. ಹೀಗಾಗಿ ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ಹಾಗೂ ಅವರ ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351, 352, 353 ಹಾಗೂ 61ರ ಅಡಿ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಅಜಯ್ ಮಾಕೇನ್ ಮನವಿ ಮಾಡಿದ್ದಾರೆ.