ಹರ್ಯಾಣ ವಿಧಾನಸಭಾ ಸೋಲಿನ ನಂತರ ಮಹಾರಾಷ್ಟ್ರ ಕಾಂಗ್ರೆಸ್ ಸನ್ನದ್ಧತೆ ಕುರಿತು ಪರಾಮರ್ಶೆ ನಡೆಸಲಿರುವ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಸನ್ನದ್ಧತೆ ಕುರಿತು ಪರಾಮರ್ಶೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸಭೆ ಕರೆದಿದ್ದಾರೆ. ಹರ್ಯಾಣದಲ್ಲಿ ಕಳೆದ ಒಂದು ದಶಕದ ಸುದೀರ್ಘ ಬಿಜೆಪಿ ಆಳ್ವಿಕೆಯ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದ್ದರಿಂದ, ಈ ಸಭೆಯು ಮಹತ್ವ ಪಡೆದುಕೊಂಡಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ವಿಜಯ್ ವಡೆಟ್ಟಿವಾರ್, ಪೃಥ್ವಿರಾಜ್ ಚೌಹಾಣ್, ಬಾಳಾಸಾಹೇಬ್ ಥೋರಟ್, ವರ್ಷ ಗಾಯಕ್ವಾಡ್ ಹಾಗೂ ರಮೇಶ್ ಚೆನ್ನಿತ್ತಲ ಸೇರಿದಂತೆ ಪಕ್ಷದ ಹಲವು ನಾಯಕರನ್ನು ಗಾಂಧಿ ಪರಿವಾರ ಭೇಟಿ ಮಾಡಲಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಸಭೆಯಲ್ಲಿ ಪಾಲ್ಗೊಳ್ಳಲು ನಾನಾ ಪಟೋಲೆ ಸೇರಿದಂತೆ ಹಲವಾರು ನಾಯಕರು 10, ರಾಜಾಜಿ ಮಾರ್ಗ್ ಗೆ ಆಗಮಿಸಲು ಪ್ರಾರಂಭಿಸಿದ್ದಾರೆ.
ಹರ್ಯಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದರಾದರೂ, ಬಿಜೆಪಿ ಎದುರು ಪರಾಭವಗೊಂಡಿದ್ದ ಕಾಂಗ್ರೆಸ್, 90 ಸ್ಥಾನಗಳ ಪೈಕಿ ಕೇವಲ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿಯು 48 ಸ್ಥಾನಗಳನ್ನು ಗಳಿಸಿತ್ತು. ಉತ್ತರ ರಾಜ್ಯವಾದ ಹರ್ಯಾಣದಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರವನ್ನು ಹಲವಾರು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಪ್ರಶ್ನಿಸಿದ್ದವು ಹಾಗೂ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದವು.
ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಚುನಾವಣಾ ಸನ್ನದ್ಧತೆಯನ್ನು ಪರಾಮರ್ಶಿಸಲು ನಡೆಯುತ್ತಿರುವ ಈ ಸಭೆಯು, ಹಲವಾರು ಮಹಾವಿಕಾಸ್ ಅಘಾಡಿ ಮಿತ್ರ ಪಕ್ಷಗಳು ಹೆಚ್ಚು ಸ್ಥಾನಗಳಿಗೆ ಆಗ್ರಹಿಸುತ್ತಿರುವುದರಿಂದಲೂ ಮಹತ್ವ ಪಡೆದುಕೊಂಡಿದೆ.