ಜಾತಿಯಾಧಾರಿತ ಮೀಸಲಾತಿ | ಶೇ.50 ಮಿತಿಯ ಕೃತಕ ತಡೆಗೋಡೆಯನ್ನು ನಾವು ಕೆಡವುತ್ತೇವೆ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಹೈದರಾಬಾದ್ :ದೇಶದಲ್ಲಿ ಶೇ.50 ಮೀಸಲಾತಿಗಳ ಕೃತಕ ತಡೆಗೋಡೆಯನ್ನು ಕೆಡವಲು ತನ್ನ ಪಕ್ಷದ ಬದ್ಧತೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.
ಮಂಗಳವಾರ ಇಲ್ಲಿ ಜಾತಿ ಗಣತಿ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು,‘ತೆಲಂಗಾಣ ನಾಯಕತ್ವವು ಜಾತಿ ಗಣತಿಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ನಾವು ಜಾತಿ ಗಣತಿಗೆ ಸಂಪೂರ್ಣ ಬದ್ಧರಾಗಿದ್ದೇವೆ ’ಎಂದು ಹೇಳಿದರು.
ತೆಲಂಗಾಣದ ಕಾಂಗ್ರೆಸ್ ಸರಕಾರವು ಬುಧವಾರ ರಾಜ್ಯದಲ್ಲಿ ಜಾತಿ ಗಣತಿಗೆ ಚಾಲನೆ ನೀಡಿದ್ದು, ಬಿಹಾರ ಮತ್ತು ಆಂಧ್ರಪ್ರದೇಶಗಳ ಬಳಿಕ ಇಂತಹ ಸಮೀಕ್ಷೆಯನ್ನು ನಡೆಸುತ್ತಿರುವ ಮೂರನೇ ರಾಜ್ಯವಾಗಿದೆ.
’ನ್ಯೂನತೆಗಳಿರಲಿವೆ, ಆದರೆ ನಾಗರಿಕ ಸಮಾಜ, ಜನತೆ ಮತ್ತು ಸರಕಾರದ ನಡುವೆ ಮಾತುಕತೆಗಳ ಮೂಲಕ ಅವುಗಳನ್ನು ಸರಿಪಡಿಸಲು ನಾವು ಪ್ರಯತ್ನಿಸುತ್ತೇವೆ ’ ಎಂದು ಹೇಳಿದ ರಾಹುಲ್, ಜಾತಿ ಗಣತಿಯು ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ಧರಿಸಲಿದೆ ಮತ್ತು ಈ ದೇಶವು ಹೇಗೆ ಪ್ರಗತಿಯನ್ನು ಸಾಧಿಸುತ್ತದೆ ಎನ್ನುವುದನ್ನು ವ್ಯಾಖ್ಯಾನಿಸಲು ಒಂದು ರಾಜಕೀಯ ಸಾಧನವಾಗಲಿದೆ ಎಂದರು.
‘ನಾವು ದೇಶದ ನೆಮ್ಮದಿ ಮತ್ತು ಪ್ರಗತಿಯ ಬಗ್ಗೆ ಮಾತನಾಡಲು ಬಯಸಿದರೆ ಮೊದಲು ತಾರತಮ್ಯದ ಸ್ವರೂಪವನ್ನು ಗುರುತಿಸೋಣ. ಬೃಹತ್ ತಾರತಮ್ಯವಿದೆ ಎನ್ನುವ ಅಂಶವನ್ನು ನಾನು ನಿರ್ಲಕ್ಷಿಸಲು ಸಾಧ್ಯವಿಲ್ಲ ಹಾಗೂ ದಲಿತರು, ಆದಿವಾಸಿಗಳು,ಮಹಿಳೆಯರು,ಇತರ ಹಿಂದುಳಿದ ವರ್ಗಗಳು ಅಥವಾ ಅಲ್ಪಸಂಖ್ಯಾತರಿಗೆ ಸುಳ್ಳುಗಳನ್ನು ಹೇಳಲೂ ನನಗೆ ಸಾಧ್ಯವಿಲ್ಲ’ ಎಂದು ರಾಹುಲ್ ಹೇಳಿದರು.
ಸರ್ವೋಚ್ಚ ನ್ಯಾಯಾಲಯವು 1992ರಲ್ಲಿ ಮೀಸಲಾತಿಗಳ ಮೇಲೆ ಶೇ.50 ಮಿತಿಯನ್ನು ಹೇರಿತ್ತು.