ರಾಹುಲ್ ಗಾಂಧಿ ಹೋರಾಟಗಾರ, ಚುನಾವಣಾ ಆಯೋಗಕ್ಕೆ ಅವರು ಪ್ರಾಮಾಣಿಕ ಉತ್ತರ ನೀಡಲಿದ್ದಾರೆ: ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ (PTI)
ಪುಣೆ: ಚುನಾವಣಾ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನುದ್ದೇಶಿಸಿ ನೀಡಿದ್ದ ‘ಜೇಬುಗಳ್ಳ’ ಹಾಗೂ ‘ಅಪಶಕುನ’ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿರುವ ರಾಹುಲ್ ಗಾಂಧಿ ಅವರು ಹೋರಾಟಗಾರರಾಗಿದ್ದು, ಅವರು ಚುನಾವಣಾ ಆಯೋಗಕ್ಕೆ ಘನತೆಯುಕ್ತ ಮತ್ತು ಪ್ರಾಮಾಣಿಕ ಉತ್ತರ ನೀಡಲಿದ್ದಾರೆ ಎಂದು ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ರಾಹುಲ್ ಗಾಂಧಿ ಬಲಿಷ್ಠ ಹಾಗೂ ಪ್ರಾಮಾಣಿಕ ನಾಯಕರಾಗಿದ್ದಾರೆ. ಅವರು ಚುನಾವಣಾ ಆಯೋಗಕ್ಕೆ ಘನತೆಯುಕ್ತ ಮತ್ತು ಪ್ರಾಮಾಣಿಕ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಅವರೊಬ್ಬ ಹೋರಾಟಗಾರ. ಅವರು ಪ್ರಾಮಾಣಿಕರಾಗಿರುವುದರಿಂದ ನಿರ್ಭಯವಾಗಿಯೂ ವರ್ತಿಸುತ್ತಾರೆ” ಎಂದು ಗುರುವಾರ ಸುಪ್ರಿಯಾ ಸುಳೆ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಬಿಜೆಪಿಯವರು ರಾಹುಲ್ ಗಾಂಧಿಯವರ ಕುಟುಂಬದ ವಿರುದ್ಧ ಮಾತನಾಡಿರುವ ಹಲವಾರು ನಿದರ್ಶನಗಳಿವೆ. ಈಗ ಅವರೇನಾದರೂ ಮಾತನಾಡಿದರೆ, ಅದರ ಬಗ್ಗೆ ಬೇಸರಿಸಿಕೊಳ್ಳುವ ಅಗತ್ಯವೇನಿದೆ? ಅವರು (ಬಿಜೆಪಿ) ರಾಹುಲ್ ಗಾಂಧಿಯವರ ಮುತ್ತಾತನ ವಿರುದ್ಧವೂ ಮಾತನಾಡಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
ಚುನಾವಣಾ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಾಹುಲ್ ಗಾಂಧಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ದೂರನ್ನು ಆಧರಿಸಿ ಭಾರತೀಯ ಚುನಾವಣಾ ಆಯೋಗವು ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.