ಬಾಲಕಿಯ ಗುರುತು ಬಹಿರಂಗಪಡಿಸುವ ‘ಎಕ್ಸ್’ ಪೋಸ್ಟ್ ಅಳಿಸುವುದಾಗಿ ಹೈಕೋರ್ಟ್ ಗೆ ರಾಹುಲ್ ಗಾಂಧಿ ಭರವಸೆ
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: 2021 ಆಗಸ್ಟ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ 9 ವರ್ಷದ ದಲಿತ ಬಾಲಕಿಗೆ ಸಂಬಂಧಿಸಿದ ಅತಿ ಸೂಕ್ಷ್ಮ ವಿವರಗಳು ಹಾಗೂ ಗುರುತನ್ನು ಬಹಿರಂಗ ಪಡಿಸುವ ತನ್ನ ‘ಎಕ್ಸ್’ನ ಪೋಸ್ಟ್ ಅನ್ನು ಅಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.
ದಿಲ್ಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ 2021 ಆಗಸ್ಟ್ ನಲ್ಲಿ ಸ್ಮಶಾನದ ಒಳಗೆ ಅರ್ಚಕನೋರ್ವ 9 ವರ್ಷದ ದಲಿತ ಬಾಲಕಿಯನ್ನು ಅತ್ಯಾಚಾರಗೈದು ಬರ್ಬರವಾಗಿ ಹತ್ಯೆಗೈದಿದ್ದ. ಈ ಘಟನೆ ಬಳಿಕ ಆಕೆಯ ಹೆತ್ತವರನ್ನು ರಾಹುಲ್ ಗಾಂಧಿ ಅವರು ಭೇಟಿಯಾಗಿದ್ದರು ಹಾಗೂ ಅವರೊಂದಿಗಿನ ಫೋಟೊವನ್ನು ತನ್ನ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಬಾಲಕಿಯ ಗುರುತು ಬಹಿರಂಗಪಡಿಸಿದ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ ಮಕರಂದ್ ಸುರೇಶ್ ಮದ್ಲೇಕರ್ ಅವರು ಸಲ್ಲಿಸಿದ ಅರ್ಜಿಯನ್ನು ಪ್ರಭಾರ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರನ್ನು ಒಳಗೊಂಡ ಇಬ್ಬರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭ ನ್ಯಾಯಾಧೀಶರು ಇದಕ್ಕೆ ಯಾವುದೇ ನ್ಯಾಯಾಂಗ ಆದೇಶವನ್ನು ಜಾರಿಗೊಳಿಸಲು ಬಯಸುವುದಿಲ್ಲ ಎಂದು ರಾಹುಲ್ ಗಾಂಧಿ ಅವರ ನ್ಯಾಯವಾದಿಗೆ ತಿಳಿಸಿದರು. ಆ ಮೂಲಕ ಅವರು ‘ಎಕ್ಸ್’ನ ಪೋಸ್ಟ್ ಅನ್ನು ಅಳಿಸಿ ಬಾಲಕಿಯ ಗುರುತು ರಕ್ಷಿಸುವಂತೆ ಸೂಚಿಸಿದರು.
ಇದಕ್ಕೆ ರಾಹುಲ್ ಗಾಂಧಿ ಪರ ನ್ಯಾಯವಾದಿ, ಈ ಪೋಸ್ಟ್ ಅನ್ನು ಅವರು ‘ಎಕ್ಸ್’ನಿಂದ ಅಳಿಸಲಿದ್ದಾರೆ ಎಂದು ಭರವಸೆ ನೀಡಿದರು.