“ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆಯ ಬಗ್ಗೆ ಮಾತನಾಡುತ್ತಾರೆ”: ರಾಹುಲ್ ಗಾಂಧಿ ಹೇಳಿಕೆಯಿಂದ ಲೋಕಸಭೆಯಲ್ಲಿ ಗದ್ದಲ
ಮೋದಿ, ಬಿಜೆಪಿ ಇಡೀ ಹಿಂದೂ ಸಮುದಾಯವಲ್ಲ ಎಂದ ವಿಪಕ್ಷ ನಾಯಕ ರಾಹುಲ್
Photo: X/@ani_digital
ಹೊಸದಿಲ್ಲಿ: ಹದಿನೆಂಟನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಮೊದಲ ಭಾಷಣವು ಇಂದು ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡುವ ವೇಳೆ ರಾಹುಲ್ ಗಾಂಧಿ ಅವರು ಆಡಳಿತ ಬೊಟ್ಟು ಮಾಡಿ “ತಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸೆಯ ಬಗ್ಗೆ ಮಾತನಾಡುತ್ತಾರೆ,” ಎಂದು ಹೇಳಿದ್ದು ಕೋಲಾಹಲಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶಿಸಿ ವಿಪಕ್ಷ ನಾಯಕ “ಹಿಂದೂಗಳೆಂದು ತಮ್ಮನ್ನು ಗುರುತಿಸುವವರೆಲ್ಲರೂ ಹಿಂಸೆಯ ಬಗ್ಗೆ ಮಾತನಾಡುತ್ತಾರೆ” ಎಂದು ಹೇಳಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ಮೋದಿ ಮತ್ತು ಬಿಜೆಪಿ ಇಡೀ ಹಿಂದೂ ಸಮುದಾಯವಲ್ಲ,” ಎಂದು ಹೇಳಿದರು.
ರಾಹುಲ್ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ಆಡಳಿತ ಪಕ್ಷಗಳು “ಮೋದಿ” “ಭಾರತ್” ಘೋಷಣೆಗಳ ನಡುವೆ ರಾಹುಲ್ ಗಾಂಧಿ ತಮ್ಮ ಭಾಷಣವನ್ನು “ಜೈ ಸಂವಿಧಾನ್” ಘೋಷಣೆಯೊಂದಿಗೆ ಪ್ರಾರಂಭಿಸಿದರು.
ಅಭಯ ಮುದ್ರೆಗಳನ್ನೂ ತೋರಿಸಿದ ರಾಹುಲ್ ಇದು ನಿರ್ಭೀತಿ ಮತ್ತು ಅಹಿಂಸೆಯ ದ್ಯೋತಕವಾಗಿದೆ ಎಂದರು.
ನೀಟ್ ವಿವಾದ ಕುರಿತಂತೆ ವಿಪಕ್ಷಗಳ ನಾಯಕರು ಮಂಡಿಸಿದ ನಿಲುವಳಿ ಸೂಚನೆಗಳನ್ನು ಸ್ಪೀಕರ್ ಓಂ ಬಿರ್ಲಾ ಕಳೆದ ವಾರ ಸ್ವೀಕರಿಸಲು ನಿರಾಕರಿಸಿದ ನಂತರ ಇಂದು ರಾಹುಲ್ ಅವರು ನೀಟ್ ಕುರಿತು ಒಂದು ದಿನದ ಚರ್ಚೆಗೆ ಆಗ್ರಹಿಸಿದರು. “ಸಂವಿಧಾನದ ಮೇಲೆ ದಾಳಿ ನಡೆದಿದೆ. ಇದನ್ನು ಪ್ರಶ್ನಿಸಿದವರ ಮೇಲೂ ದಾಳಿ ನಡೆದಿವೆ. ಎಲ್ಲಾ ಆಯಾಮಗಳಿಂದಲೂ ನನ್ನ ಮೇಲೆ ದಾಳಿ ನಡೆದಿದೆ. ನನ್ನನ್ನು ಈಡಿ 55 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ,” ಎಂದು ರಾಹುಲ್ ಹೇಳಿದರು.