ಕೋಲ್ಕತ್ತಾ ವೈದ್ಯೆಯ ಹತ್ಯೆ ಪ್ರಕರಣ ಖಂಡಿಸಿದ ರಾಹುಲ್ ಗಾಂಧಿ | ಕಾಂಗ್ರೆಸ್ ನ ನಿರಾಶಾದಾಯಕ ದಾಖಲೆಯನ್ನು ಮರೆಯದಿರಲಿ ಎಂದು ತಿರುಗೇಟು ನೀಡಿದ ಟಿಎಂಸಿ
ರಾಹುಲ್ ಗಾಂಧಿ | PC : PTI
ಕೋಲ್ಕತ್ತಾ: ಕೋಲ್ಕತ್ತಾದ ತರಬೇತಿ ನಿರತ ವೈದ್ಯೆಯೋರ್ವಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಆಡಳಿತಾರೂಢ ಟಿಎಂಸಿ, ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರಗಳಿದ್ದಾಗ, ಮಹಿಳಾ ಸುರಕ್ಷತೆಯಲ್ಲಿ ಅದರ ನಿರಾಶಾದಾಯಕ ದಾಖಲೆಯನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಕುಟುಕಿದೆ.
ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಬದಲು, ಆರೋಪಿಯ ರಕ್ಷಣೆಗೆ ಯತ್ನ ಮಾಡುತ್ತಿರುವುದು ಆಸ್ಪತ್ರೆ ಹಾಗೂ ಸ್ಥಳೀಯ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತುತ್ತದೆ ಎಂದು ಬುಧವಾರ ಬೆಳಗ್ಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದರು.
ಇಡೀ ದೇಶ ಈ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯಿಂದ ಆಘಾತಕ್ಕೀಡಾಗಿದೆ. ಆಕೆಯ ಮೇಲೆ ನಡೆದಿರುವ ಕ್ರೂರ ಹಾಗೂ ಅಮಾನವೀಯ ಕೃತ್ಯ ಬಹಿರಂಗಗೊಂಡ ನಂತರ ವೈದ್ಯ ಸಮುದಾಯ ಹಾಗೂ ಮಹಿಳೆಯರಲ್ಲಿ ಅಸುರಕ್ಷತೆಯ ವಾತಾವರಣ ಮನೆ ಮಾಡಿದೆ ಎಂದು ಅವರು ಹೇಳಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಬದಲು, ಆರೋಪಿಯನ್ನು ರಕ್ಷಿಸಲು ಯತ್ನಿಸುತ್ತಿರುವುದು ಆಸ್ಪತ್ರೆ ಹಾಗೂ ಸ್ಥಳೀಯ ಆಡಳಿತದ ಬಗ್ಗೆ ಪ್ರಶ್ನೆಗಳನ್ನೆತ್ತುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಆದರೆ, ಈ ಆರೋಪಗಳು ನಿರಾಧಾರ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಕುನಾಲ್ ಘೋಷ್ ತಳ್ಳಿ ಹಾಕಿದ್ದಾರೆ.