ಇತ್ತೀಚೆಗೆ ಭೇಟಿಯಾಗಿದ್ದ ಚಮ್ಮಾರನಿಗೆ ಹೊಲಿಗೆ ಯಂತ್ರ ಉಡುಗೊರೆ ನೀಡಿದ ರಾಹುಲ್ ಗಾಂಧಿ
ಇನ್ನು ಮುಂದೆ 8-10 ಜೊತೆ ಶೂಗಳನ್ನು ಹೊಲೆಯಬಹುದು ಎಂದ ರಾಮ್ ಚೇತ್
Photo:X/@INCIndia
ಹೊಸದಿಲ್ಲಿ: ಸುಲ್ತಾನ್ ಪುರ್ ನಲ್ಲಿರುವ ರಾಮ್ ಚೇತ್ ಎಂಬುವವರ ಚಪ್ಪಲಿ ಅಂಗಡಿಯಲ್ಲಿ ಶುಕ್ರವಾರ ಕೊಂಚ ಕಾಲ ತಂಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶನಿವಾರ ಅವರಿಗೆ ಹೊಲಿಗೆ ಯಂತ್ರವೊಂದನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ರಾಮ್ ಚೇತ್ ರೊಂದಿಗೆ ಅರ್ಧ ಗಂಟೆ ಕಾಲ ಅವರ ಉದ್ಯೋಗದ ಸವಾಲಿನ ಕುರಿತು ಚರ್ಚಿಸಿದ್ದ ರಾಹುಲ್ ಗಾಂಧಿ, ಈ ಸಂದರ್ಭದಲ್ಲಿ ಅವರಿಗೆ ನೆರವು ನೀಡುವ ಭರವಸೆ ನೀಡಿದ್ದರು.
ರಾಹುಲ್ ಗಾಂಧಿ ಅವರ ಈ ಔದಾರ್ಯವನ್ನು ಪ್ರಶಂಸಿಸಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅನ್ಷು ಅವಸ್ಥಿ, “ನಿನ್ನೆ ಚಮ್ಮಾರರ ಕುಟುಂಬವನ್ನು ಭೇಟಿ ಮಾಡಿದ್ದ ಜನ ನಾಯಕ ರಾಹುಲ್ ಗಾಂಧಿ, ಅವರ ಉದ್ಯೋಗದ ನೋವನ್ನು ಕೇಳಿ ಅರ್ಥ ಮಾಡಿಕೊಂಡಿದ್ದರು. ರಾಹುಲ್ ಗಾಂಧಿ ಇಂದು ಅವರು ಭವಿಷ್ಯದಲ್ಲಿ ಸುಲಭವಾಗಿ ಕೆಲಸ ಮಾಡಲು ಚಮ್ಮಾರ ವೃತ್ತಿಯಲ್ಲಿ ಬಳಸಲಾಗುವ ಹೊಲಿಗೆ ಯಂತ್ರವನ್ನು ಕಳಿಸಿಕೊಟ್ಟಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ನಮಗೆ ನಮ್ಮ ಜನ ನಾಯಕ ರಾಹುಲ್ ಗಾಂಧಿ ಬಗ್ಗೆ ಹೆಮ್ಮೆಯಾಗಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮತ್ತೊಬ್ಬ ವಕ್ತಾರ ಮನೀಶ್ ಹಿಂದ್ವಿ ಕೂಡಾ ರಾಹುಲ್ ಗಾಂಧಿ ನಡೆಯನ್ನು ಶ್ಲಾಘಿಸಿದ್ದು, ಅವರು ತಾನು ಬಡವರು ಹಾಗೂ ತುಳಿತಕ್ಕೊಳಗಾದವರ ಪರ ನಿಲ್ಲುವುದಾಗಿ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ್ದಾರೆ.
ಹೊಲಿಗೆ ಯಂತ್ರ ಸ್ವೀಕರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಮ್ ಚೇತ್, ಇನ್ನು ಮಂದೆ 8-10 ಜೊತೆ ಶೂಗಳನ್ನು ಹೊಲೆಯಲು ಸಾಧ್ಯವಾಗಲಿದೆ. ಇದರೊಂದಿಗೆ ಶಾಲಾ ಬ್ಯಾಗ್ ಗಳು, ಪರ್ಸ್ ಗಳು ಹಾಗೂ ಇನ್ನಿತರ ಸಾಧನಗಳನ್ನೂ ಹೊಲೆಯಬಹುದಾಗಿದೆ ಎಂದು ಹೇಳಿದ್ದಾರೆ.