ನ್ಯಾಯ ಯಾತ್ರೆಯಲ್ಲಿ ಜನರತ್ತ ಕೈ ಬೀಸುತ್ತಿರುವ ವ್ಯಕ್ತಿ ರಾಹುಲ್ ಗಾಂಧಿಯೇ ಅಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಆರೋಪ
Photo: PTI
ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ತದ್ರೂಪಿಯನ್ನು ಒದಗಿಸಿರುವ ಸಂಸ್ಥೆಯ ಹೆಸರು ಹಾಗೂ ವಿಳಾಸವನ್ನು ನಾನು ಶೀಘ್ರದಲ್ಲಿಯೇ ಹಂಚಿಕೊಳ್ಳಲಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಬಾಂಬ್ ಸಿಡಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಾಂಗ್ರೆಸ್ ಸಂಸದರೂ ಆದ ರಾಹುಲ್ ಗಾಂಧಿ ವಿರುದ್ಧ ತದ್ರೂಪಿಯನ್ನು ಬಳಸುತ್ತಿರುವ ಆರೋಪ ಮಾಡಿದ ಶರ್ಮ, ನ್ಯಾಯ ಯಾತ್ರೆ ಬಸ್ ನಲ್ಲಿ ಕುಳಿತು ಜನರತ್ತ ಕೈ ಬೀಸುತ್ತಿರುವ ವ್ಯಕ್ತಿ ರಾಹುಲ್ ಗಾಂಧಿಯೇ ಅಲ್ಲ ಎಂದು ವರದಿಯೊಂದನ್ನು ಉಲ್ಲೇಖಿಸಿ ದೂರಿದ್ದಾರೆ.
“ನಾನು ಕೇವಲ ಬಾಯಿ ಮಾತಿಗೆ ಹೇಳುವವನಲ್ಲ. ತದ್ರೂಪಿಯ ಹೆಸರು, ಅದನ್ನು ಹೇಗೆ ಮಾಡಲಾಗಿದೆ ಎಂಬೆಲ್ಲದರ ಕುರಿತು ನಾನು ವಿವರಗಳನ್ನು ಹಂಚಿಕೊಳ್ಳಲಿದ್ದೇನೆ. ಕೆಲ ದಿನಗಳ ಕಾಲ ಕಾಯಿರಿ” ಎಂದು ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ರಾಹುಲ್ ಗಾಂಧಿ ಕುರಿತು ಅವರು ಮಾಡಿದ್ದ ಆರೋಪಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ್ದಾರೆ.
“ನಾನು ನಾಳೆ ದಿಬ್ರುಗಢ್ ನಲ್ಲಿ ಇರಲಿದ್ದು, ನಾಡಿದ್ದೂ ಕೂಡಾ ನಾನು ಗುವಾಹಟಿಯಿಂದ ಹೊರಗಿರಲಿದ್ದೇನೆ. ನಾನು ಗುವಾಹಟಿಗೆ ಮರಳುತ್ತಿದ್ದಂತೆಯೆ, ತದ್ರೂಪಿಯ ಹೆಸರು ಮತ್ತು ವಿಳಾಸವನ್ನು ಒದಗಿಸುತ್ತೇನೆ” ಎಂದು ಅವರು ಭರವಸೆ ನೀಡಿದ್ದಾರೆ.