ನೀವು ರಾಹುಲ್ ಗಾಂಧಿಯನ್ನು ತಡೆಯಲು ಸಾಧ್ಯವಿಲ್ಲ: ವಿಪಕ್ಷ ನಾಯಕನ ಭಾಷಣವನ್ನು ಹೊಗಳಿದ ‘ಸಾಮ್ನಾ’ ಪತ್ರಿಕೆ
ರಾಹುಲ್ ಗಾಂಧಿ | PC: PTI
ಮುಂಬೈ : ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯು ಲೋಕಸಭೆಯಲ್ಲಿ ಜುಲೈ 1ರಂದು ರಾಹುಲ್ ಗಾಂಧಿ ಮಾಡಿದ ಭಾಷಣವನ್ನು ಹಾಡಿ ಹೊಗಳಿದ್ದು, ನೀವು ರಾಹುಲ್ ಗಾಂಧಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ನಾಯಕರು ರಾಹುಲ್ ಗಾಂಧಿ ಮಾಡಿದ ಭಾಷಣದ ರೀತಿಯ ಸನ್ನಿವೇಷವನ್ನು ಎದುರಿಸಿರಲಿಲ್ಲ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಭಾಷಣದಂತೆ ಮುಂದಿನ ದಿನಗಳಲ್ಲಿ ಸರ್ವಾಧಿಕಾರಿಗಳು ಪತನಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಅವರು ಮೋದಿಯ ದೈವತ್ವದ ಮುಖವಾಡವನ್ನು ಕಳಚಿದ್ದಾರೆ. ಇದಕ್ಕಾಗಿ ವಿಪಕ್ಷದ ನಾಯಕ ರಾಹುಲ್ ಅವರನ್ನು ಎಷ್ಟು ಅಭಿನಂದಿಸಿದರೂ ಸಾಲದು ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ತಿಳಿಸಲಾಗಿದೆ.
ಬಿಜೆಪಿಯು ಹಿಂದುತ್ವದ ಏಕಸ್ವಾಮ್ಯವನ್ನು ಹೊಂದಿಲ್ಲ ಎಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಹೇಳಿರುವುದು ಕಳೆದ 10 ವರ್ಷಗಳಲ್ಲಿಯೇ ಸಂಸತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ ಎಂದು ಸಾಮ್ನಾ ಉಲ್ಲೇಖಿಸಿದೆ. ರಾಹುಲ್ ಗಾಂಧಿ ನೇತೃತ್ವದ ಬಿಲಿಷ್ಠ ವಿಪಕ್ಷ ಸಂಸತ್ತಿನಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದೆ. ಕಳೆದ 10 ವರ್ಷಗಳಿಂದ ಬಿಜೆಪಿಯು ಹಿಂದುತ್ವ ಹಾಗೂ ಧರ್ಮದ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸುತ್ತಿತ್ತು. ಆದರೆ ಅವರಿಗೆ ಈಗ ಕನ್ನಡಿಯಲ್ಲಿ ನಿಜವಾದ ಮುಖ ತೋರಿಸಲಾಗಿದೆ ಎಂದು ʼಸಾಮ್ನಾʼದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.