ಅಮೆರಿಕಾದ ಪ್ರತಿ ಸುಂಕ ಹೇರಿಕೆಯಿಂದ ದೇಶದ ಆರ್ಥಿಕತೆ ಭಗ್ನ: ರಾಹುಲ್ ಗಾಂಧಿ ಕಳವಳ
Photo : ANI
ಹೊಸದಿಲ್ಲಿ: ಒಂದೆಡೆ ಚೀನಾವು ಭಾರತದ 4 ಸಾವಿರ ಚ.ಕಿ.ಮೀ. ಭೂಭಾಗವನ್ನು ಅತಿಕ್ರಮಿಸಿಕೊಂಡಿದ್ದರೆ, ಇನ್ನೊಂದೆಡೆ ಅಮೆರಿಕವು ಭಾರತದ ಉತ್ಪನ್ನಗಳಿಗೆ ಪ್ರತಿ ಸುಂಕವನ್ನು ಹೇರಿರುವುದರಪಿಂದ ದೇಶದ ಆರ್ಥಿಕತೆಗೆ ಹಾನಿಯಾಗಲಿದೆ.ಇವೆರಡರ ಬಗ್ಗೆ ಕೇಂದ್ರ ಸರಕಾರವು ಉತ್ತರಿಸಬೇಕಾಗಿದೆ ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಅಮೆರಿಕವು ಭಾರತದ ಉತ್ಪನ್ನಗಳಿಗೆ ವಿಧಿಸಿರುವ ಪ್ರತಿಸುಂಕವು ಭಾರತೀಯ ಆರ್ಥಿಕತೆಯನ್ನು ಸಂಪೂರ್ಣ ಹಾಳುಗೆಡವಲಿದೆ. ಅದರಲ್ಲೂ ವಿಶೇಷವಾಗಿ ಭಾರತದ ಆಟೋ ಉದ್ಯಮ, ಫಾರ್ಮಾಸ್ಯೂಟಿಕಲ್ ಹಾಗೂ ಕೃಷಿ ಕ್ಷೇತ್ರವು ತೀವ್ರವಾಗಿ ಹಾನಿಗೀಡಾಗಲಿದೆ ಎಂದರು.
ಚೀನಾವು ಭಾರತಕ್ಕೆ ಸೇರಿದ 4 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಹೀಗಿರುವಾಗ ಕೆಲವು ಸಮಯದ ನಮ್ಮ ವಿದೇಶಾಂಗ ಕಾರ್ಯದರ್ಶಿ ವಿವೇಕ್ ಮಿಶ್ರಿ ಅವರು ಚೀನಾದ ರಾಯಭಾರಿ ಜೊತೆಗೆ ಕೇಕ್ ಕತ್ತರಿಸುವ ದೃಶ್ಯವನ್ನು ಕಂಡು ನನಗೆ ಆಘಾತವಾಗಿದೆ ಎಂದರು. ಭಾರತ ಹಾಗೂ ಚೀನಾದ ನಡುವಿನ ರಾಜತಾಂತ್ರಿಕ ಬಾಂಧವ್ಯದ 75 ವರ್ಷಾಚರಣೆಯನ್ನು ನಡೆಸುತ್ತಿರುವುದಕ್ಕಾಗಿ ಅವರು ಭಾರತ ಸರಕಾರವನ್ನು ಖಂಡಿಸಿದರು.
2020ರಲ್ಲಿ ಗಲ್ವಾನ್ನಲ್ಲಿ ಚೀನಾ ಸೈನಿಕರ ಜೊತೆ ನಡೆದ ಸಂಘರ್ಷದಲ್ಲಿ 20 ಮಂದಿ ಯೋಧರು ಮೃತಪಟ್ಟ ಘಟನೆಯನ್ನು ರಾಹುಲ್ ಸ್ಮರಿಸಿಕೊಂಡರು. ಕೇಕ್ ಕತ್ತರಿಸುವ ಮೂಲಕ ಈ ಯೋಧರ ಹುತಾತ್ಮತೆಯನ್ನು ಸಂಭ್ರಮಿಸಲಾಗಿದೆ. ನಾವು ನಮ್ಮ ಭೂಮಿಯನ್ನು ಹಿಂಪಡೆಯಬೇಕಾಗಿದೆ ಎಂದರು.
ಚೀನಾಕ್ಕೆ ನೀವು 4 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ನೀಡಿದ್ದೀರಿ. ಇನ್ನೊಂದೆಡೆ ನಿಮ್ಮ ಸ್ನೇಹಿತನಾದ ಅಮೆರಿಕವು ಹಠಾತ್ತನೇ ಪ್ರತಿಸುಂಕವನ್ನು ವಿಧಿಸಿದೆ. ಇವುಗಳ ಬಗ್ಗೆ ಭಾರತ ಸರಕಾರವು ಉತ್ತರಿಸಬೇಕಾಗಿದೆ ಎಂದರು.
‘‘ವಿದೇಶಾಂಗ ನೀತಿಯ ವಿಷಯದಲ್ಲಿ ಇಂದಿರಾಗಾಂಧಿಯವರಿಗೆ ಹಿಂದೊಮ್ಮೆ ಯಾರೋ ಪ್ರಶ್ನಿಸಿರುವುದನ್ನು ರಾಹುಲ್ ಸದನದಲ್ಲಿ ಸ್ಮರಿಸಿಕೊಂಡರು. ವಿದೇಶಾಂಗ ನೀತಿಯ ವಿಷಯದಲ್ಲಿ ನೀವು ಎಡ ಭಾಗಕ್ಕೆ ವಾಲುವಿರೋ ಅಥವಾ ಬಲಭಾಗಕ್ಕೆ ವಾಲುತ್ತಿರೋ ಎಂದು ಪ್ರಶ್ನಿಸಿದರು. ಆಗ ಇಂದಿರಾ ಅವರು ನಾನು ಎಡಕ್ಕಾಗಲಿ, ಬಲಕ್ಕಾಗಲಿ ವಾಲುವುದಿಲ್ಲ. ನಾನು ನೇರವಾಗಿ ನಿಲ್ಲುತ್ತೇನೆ’’ ಎಂದು ಉತ್ತರಿಸಿದ್ದರು ಎಂದರು.