ಉದ್ಯೋಗ ಕುರಿತು ಪ್ರಧಾನಿ ಮೋದಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಶುಕ್ರವಾರ ನಿರುದ್ಯೋಗದ ಕುರಿತು ಪ್ರಧಾನಿ ಮೋದಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉದ್ಯೋಗ ಸೃಷ್ಟಿ ಕುರಿತು ಸರಕಾರದ ಧೋರಣೆಯನ್ನು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “2024ರ ಚುನಾವಣೆಯ ಸಂದರ್ಭದಲ್ಲೇ ಉದ್ಯೋಗ ಸಂಬಂಧಿತ ಭತ್ಯೆ ಯೋಜನೆಯನ್ನು ಪ್ರಕಟಿಸಿದ್ದರೂ, ಆ ಯೋಜನೆಯ ಚೌಕಟ್ಟು ಇದುವರೆಗೂ ವ್ಯಾಖ್ಯಾನಗೊಂಡಿಲ್ಲ. ಹೀಗಾಗಿ, ಈ ಯೋಜನೆಗಾಗಿ ಮಂಜೂರು ಮಾಡಿದ್ದ 10,000 ಕೋಟಿ ರೂ. ಖಜಾನೆಗೆ ಮರಳಿ ಬಂದಿದೆ” ಎಂದು ಉದ್ಯೋಗ ಸಂಬಂಧಿತ ಭತ್ಯೆ ಯೋಜನೆಯತ್ತ ನಿರ್ದಿಷ್ಟವಾಗಿ ಬೊಟ್ಟು ಮಾಡಿ ವಾಗ್ದಾಳಿ ನಡೆಸಿದ್ದಾರೆ.
“2024ರ ಚುನಾವಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಭಾರಿ ಪ್ರಚಾರದೊಂದಿಗೆ ನಮ್ಮ ಯುವಕರಿಗೆ ಉದ್ಯೋಗ ಒದಗಿಸುವ ಭರವಸೆಯೊಂದಿಗೆ ಉದ್ಯೋಗ ಸಂಬಂಧಿತ ಭತ್ಯೆ ಯೋಜನೆಯನ್ನು ಪ್ರಕಟಿಸಿದರು. ಆದರೆ, ಈ ಯೋಜನೆ ಪ್ರಕಟಗೊಂಡು ಒಂದು ವರ್ಷವೇ ಆಗಿದ್ದರೂ, ಈ ಯೋಜನೆಯ ಚೌಕಟ್ಟನ್ನು ಸರಕಾರ ಇದುವರೆಗೂ ವ್ಯಾಖ್ಯಾನಿಸಿಲ್ಲ. ಹೀಗಾಗಿ, ಈ ಯೋಜನೆಗೆ ಮಂಜೂರು ಮಾಡಲಾಗಿದ್ದ 10,000 ಕೋಟಿ ರೂ. ಖಜಾನೆಗೆ ಮರಳಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ನಿರುದ್ಯೋಗದ ಬಗ್ಗೆ ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ತೋರಿಸುತ್ತಿದೆ” ಎಂದೂ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಉದ್ಯಮಪತಿಗಳಿಗೆ ನೆರವು ನೀಡಿ, ಭಾರತದ ಸಾಂಪ್ರದಾಯಿಕ ಕೌಶಲ ಹಾಗೂ ಕಿರು ಉದ್ಯಮಗಳನ್ನು ಕಡೆಗಣಿಸುವ ಮೂಲಕ ಉದ್ಯೋಗ ಸೃಷ್ಟಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದೂ ಅವರು ಕಿವಿಮಾತು ಹೇಳಿದ್ದಾರೆ.
“ಉದ್ಯಮಪತಿಗಳಿಗೆ ನೆರವು ನೀಡುವುದು, ನ್ಯಾಯಯುತ ವ್ಯಾಪಾರದ ಬದಲು ಆಪ್ತ ಉದ್ಯಮಿಗಳಿಗೆ ಪ್ರೋತ್ಸಾಹ ಒದಗಿಸುವುದು, ಉತ್ಪಾದನೆಯ ಬದಲು ಬಿಡಿ ಭಾಗಗಳ ಜೋಡಣೆಗೆ ಆದ್ಯತೆ ನೀಡುವುದು ಹಾಗೂ ಭಾರತದ ಸ್ವದೇಶಿ ಕೌಶಲಗಳಿಗೆ ಅಗೌರವ ತೋರುವುದರಿಂದ ಉದ್ಯೋಗಗಳ ಸೃಷ್ಟಿ ಸಾಧ್ಯವಿಲ್ಲ” ಎಂದು ಅವರು ಚಾಟಿ ಬೀಸಿದ್ದಾರೆ.
ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಲ್ಲಿ ಭಾರಿ ಪ್ರಮಾಣದ ಹೂಡಿಕೆ, ಸ್ಪರ್ಧಾತ್ಮಕತೆಯಿರುವ ನ್ಯಾಯಯುತ ಮಾರುಕಟ್ಟೆ, ಸ್ಥಳೀಯ ಉತ್ಪಾದನಾ ಜಾಲಗಳು ಹಾಗೂ ಸಮರ್ಪಕ ಕೌಶಲಗಳನ್ನು ಹೊಂದಿರುವ ಯುವಕರಿಗೆ ಪ್ರೋತ್ಸಾಹ ನೀಡುವ ಮೂಲಕ ಮಾತ್ರ ಅರ್ಥಪೂರ್ಣ ಉದ್ಯೋಗ ಸೃಷ್ಟಿ ಸಾಧ್ಯಲವಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಆದರೆ, ಪ್ರಧಾನಿ ಮೋದಿಗೆ ಈ ಸಲಹೆಗಳು ಪಥ್ಯವಾಗುವುದಿಲ್ಲ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
“ನೀವು ಭಾರಿ ಪ್ರಚಾರದೊಂದಿಗೆ ಉದ್ಯೋಗ ಸಂಬಂಧಿತ ಭತ್ಯೆ ಯೋಜನೆಯನ್ನು ಪ್ರಕಟಿಸಿದಿರಿ. ಆದರೆ, 10,000 ಕೋಟಿ ರೂ. ಮೊತ್ತದ ಈ ಯೋಜನೆ ಎಲ್ಲಿ ನಾಪತ್ತೆಯಾಯಿತು? ನೀವು ನಿಮ್ಮ ಭರವಸೆಗಳಿಂದ ನಮ್ಮ ನಿರುದ್ಯೋಗಿ ಯುವಕರನ್ನು ಕೈಬಿಟ್ಟಿರಾ?” ಎಂದೂ ಅವರು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಉದಾತ್ತ ಆರ್ಥಿಕ ಕಾರ್ಯಸೂಚಿಯ ಕುರಿತೂ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. “ನೀವು ಪ್ರತಿ ದಿನ ಹೊಸ ಘೋಷಣೆಯನ್ನು ಸೃಷ್ಟಿಸುವಾಗ, ನಮ್ಮ ಯುವಕರು ಈಗಲೂ ನೈಜ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಭಾರತಕ್ಕೆ ಅತ್ಯಗತ್ಯವಾಗಿರುವ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಲು ನೀವು ಯಾವ ಭದ್ರ ಯೋಜನೆಯನ್ನು ಹೊಂದಿದ್ದೀರಿ? ಅಥವಾ ಇದೂ ಕೂಡಾ ಮತ್ತೊಂದು ವಂಚನೆಯೆ?” ಎಂದು ಅವರು ಛೇಡಿಸಿದ್ದಾರೆ.
ಇದಕ್ಕೂ ಮುನ್ನ, ಕಳೆದ ತಿಂಗಳು ಬಿಹಾರದಲ್ಲಿ ಕಾಂಗ್ರೆಸ್ ಪಕ್ಷವು ‘ವಲಸೆ ತಪ್ಪಿಸಿ, ಉದ್ಯೋಗ ಒದಗಿಸಿ’ ಯಾತ್ರೆಗೆ ಚಾಲನೆ ನೀಡಿತ್ತು. ಈ ಯಾತ್ರೆಯ ವೇಳೆ ಬಿಹಾರದ ಯುವಕರು ದೊಡ್ಡ ಪ್ರಮಾಣದಲ್ಲಿ ರಾಜ್ಯದಿಂದ ವಲಸೆ ಹೋಗಲು ನಿರುದ್ಯೋಗ ಕಾರಣ ಎಂದು ಕಾಂಗ್ರೆಸ್ ಆರೋಪಿಸಿತ್ತು.
ರಾಹುಲ್ ಗಾಂಧಿ ಆರೋಪಗಳಿಗೆ ತೀಕ್ಷ್ಣ ತಿರುಗೇಟು ನೀಡಿರುವ ಬಿಜೆಪಿ, “ರಾಹುಲ್ ಗಾಂಧಿಯು ಭಾರತೀಯ ಯುವಕರನ್ನು ಹಾದಿ ತಪ್ಪಿಸಲು ಅಜ್ಞಾನವನ್ನು ಆಯುಧವನ್ನಾಗಿ ಬಳಸುತ್ತಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ, “ರಾಹುಲ್ ಗಾಂಧಿಗೆ ಉದ್ಯೋಗ ಸೃಷ್ಟಿಯ ಕುರಿತು ಯಾರೋ ತಪ್ಪು ಮಾಹಿತಿ ನೀಡಿರಬೇಕು ಇಲ್ಲವೆ, ಭಾರತೀಯ ಯುವಕರನ್ನು ಪ್ರಚೋದಿಸಲು ಅವರು ಉದ್ದೇಶಪೂರ್ವಕವಾಗಿ ವಾಸ್ತವವನ್ನು ವಿರೂಪಗೊಳಿಸುತ್ತಿರಬೇಕು” ಎಂದು ಆರೋಪಿಸಿದ್ದಾರೆ.
ಯುಪಿಎ ಸರಕಾರದ ಒಂದು ದಶಕದ ಅವಧಿಯಲ್ಲಿ ಸೃಷ್ಟಿಯಾಗಿದ್ದ 2.9 ಕೋಟಿ ಉದ್ಯೋಗಾವಕಾಶಗಳಿಗೆ ಹೋಲಿಸಿದರೆ, 2014-2024ರ ನಡುವೆ ಮೋದಿ ಸರಕಾರ 17.19 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.