ಅಗ್ನಿಪಥ್ ಯೋಜನೆ ಕುರಿತು ಲೋಕಸಭೆಯಲ್ಲಿ ರಾಹುಲ್ ಗಾಂಧಿ-ರಾಜ್ ನಾಥ್ ಸಿಂಗ್ ನಡುವೆ ವಾಗ್ಯುದ್ಧ
ರಾಜ್ ನಾಥ್ ಸಿಂಗ್ , ರಾಹುಲ್ ಗಾಂಧಿ | PTI
ಹೊಸದಿಲ್ಲಿ: ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೊಳಗಾಗಿರುವ ಅಗ್ನಿಪಥ್ ಯೋಜನೆಯ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ನಡುವೆ ಸಂಸತ್ತಿನಲ್ಲಿ ಇಂದು ವಾಗ್ಯುದ್ಧ ನಡೆಯಿತು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಜನತೆಗೆ ತಪ್ಪು ಮಾಹಿತಿ ನೀಡುವ ಮೂಲಕ ಅವರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ಸದನದಲ್ಲಿ ಈ ಕುರಿತು ಚರ್ಚಿಸಲು ಸಿದ್ಧ ಎಂದು ಸವಾಲು ಎಸೆದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಕುರಿತು ಭಾಷಣ ಮಾಡಿದ ರಾಹುಲ್ ಗಾಂಧಿ, ಪಿಂಚಣಿಯ ಗೈರನ್ನು ಉಲ್ಲೇಖಿಸಿ, ಅಗ್ನಿಪಥ್ ಯೋಜನೆಯು ದೇಶದ ಯೋಧರ ಹಾಗೂ ಅವರ ಕುಟುಂಬದ ಸದಸ್ಯರ ಆರ್ಥಿಕ ಭದ್ರತೆ ಹಾಗೂ ಗೌರವವನ್ನು ದರೋಡೆ ಮಾಡಿದೆ ಎಂದು ಟೀಕಿಸಿದರು. ಈ ಯೋಜನೆಯು ಯುವಕರ ವಿರೋಧಿ ಹಾಗೂ ರೈತರ ವಿರೋಧಿ ನಿಲುವನ್ನು ಬಯಲು ಮಾಡಿದೆ ಎಂದು ಅವರು ಆರೋಪಿಸಿದರು.
ನಂತರ, ರಾಹುಲ್ ಗಾಂಧಿಯ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ರಾಹುಲ್ ಗಾಂಧಿ ಅವರು ಬಜೆಟ್ ಬಗ್ಗೆ ಹಲವಾರು ತಪ್ಪು ಕಲ್ಪನೆಗಳನ್ನು ಪ್ರಚಾರ ಮಾಡಿದ್ದು, ಆ ಕುರಿತು ತಮ್ಮ ಮುಂದಿನ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಲಿದ್ದಾರೆ. ವಿಪಕ್ಷ ನಾಯಕರು ಅಗ್ನಿಪಥ್ ಯೋಜನೆಯ ಕುರಿತು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಹರಿಹಾಯ್ದರು.
ಜುಲೈ 1ರಂದೂ ಕೂಡಾ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ನಡುವೆ ಇಂತಹುದೇ ಮಾತಿನ ಚಕಮಕಿ ನಡೆದಿತ್ತು.
“ಓರ್ವ ಅಗ್ನಿವೀರನು ಸ್ಫೋಟದಿಂದ ಮೃತಪಟ್ಟಿದ್ದಾರೆ. ಹೀಗಿದ್ದೂ ಅವರನ್ನು ‘ಹುತಾತ್ಮ’ ಎಂದು ಪರಿಗಣಿಸಲಾಗಿಲ್ಲ. ನಾನು ಅವರನ್ನು ಹುತಾತ್ಮ ಎಂದು ಪರಿಗಣಿಸುತ್ತೇನೆ. ಆದರೆ, ಭಾರತ ಸರಕಾರವು ಹಾಗೆ ಪರಿಗಣಿಸುವುದಿಲ್ಲ. ಪ್ರಧಾನಿ ಮೋದಿ ಅವರನ್ನು ಹುತಾತ್ಮ ಎಂದು ಕರೆಯುವುದಿಲ್ಲ. ಬದಲಿಗೆ, ಅಗ್ನಿವೀರ್ ಎಂದಷ್ಟೇ ಸಂಬೋಧಿಸುತ್ತಾರೆ. ಅವರ ಕುಟುಂಬವು ಪಿಂಚಣಿಯನ್ನಾಗಲಿ ಅಥವಾ ಪರಿಹಾರವನ್ನಾಗಲಿ ಸ್ವೀಕರಿಸುವುದಿಲ್ಲ. ಅಗ್ನಿವೀರ್ ಯೋಜನೆಯು ಅವರನ್ನು ಕೂಲಿ ಕಾರ್ಮಿಕರ ವಿಸ್ತರಣೆಯಂತೆ ಭಾವಿಸುತ್ತದೆ” ಎಂದು ಅಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ರಾಹುಲ್ ಗಾಂಧಿಯವರ ಈ ಭಾಷಣಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.
ರಾಹುಲ್ ಗಾಂಧಿ ಭಾಷಣಕ್ಕೆ ತಿರುಗೇಟು ನೀಡಿದ್ದ ರಾಜ್ ನಾಥ್ ಸಿಂಗ್, ರಾಹುಲ್ ಗಾಂಧಿ ಅವರು ಸದನವನ್ನು ದಾರಿ ತಪ್ಪಿಸುತ್ತಿದ್ದು, ಕರ್ತವ್ಯ ನಿರತ ಅಗ್ನಿವೀರರು ಮೃತಪಟ್ಟರೆ, ಅವರ ಕುಟುಂಬವು ರೂ. ಒಂದು ಕೋಟಿ ಆರ್ಥಿಕ ನೆರವು ಪಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು.
“ರಾಹುಲ್ ಗಾಂಧಿ ತಪ್ಪಾದ ಹೇಳಿಕೆಯ ಮೂಲಕ ಸದನವನ್ನು ದಾರಿ ತಪ್ಪಿಸಬಾರದು. ಅಗ್ನಿವೀರರು ನಮ್ಮ ಗಡಿಯನ್ನು ರಕ್ಷಿಸುವಾಗ ಅಥವಾ ಯುದ್ಧದ ವೇಳೆ ತಮ್ಮ ಜೀವ ತ್ಯಾಗ ಮಾಡಿದರೆ, ಅಂಥವರ ಕುಟುಂಬಕ್ಕೆ ರೂ. 1 ಕೋಟಿ ಆರ್ಥಿಕ ನೆರವನ್ನು ಒದಗಿಸಲಾಗುವುದು” ಎಂದು ಅವರು ಹೇಳಿದ್ದರು.
ಇದಾದ ನಂತರ, ಕರ್ತವ್ಯನಿರತರಾಗಿದ್ದಾಗ ಮೃತಪಟ್ಟಿದ್ದ ಅಗ್ನಿವೀರ್ ಅಜಯ್ ಕುಮಾರ್ ಅವರ ತಂದೆಯ ವಿಡಿಯೊವೊಂದನ್ನು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು. ಆ ವಿಡಿಯೊದಲ್ಲಿ, ನಮ್ಮ ಕುಟುಂಬವು ಸರಕಾರದಿಂದ ಯಾವುದೇ ಪರಿಹಾರವನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿದ್ದ ಮೃತ ಯೋಧ ಅಜಯ್ ಕುಮಾರ್ ಅವರ ತಂದೆ, ತಮ್ಮ ಕುಟುಂಬಕ್ಕೆ ಸೌಲಭ್ಯಗಳು ಹಾಗೂ ಪಿಂಚಣಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದರು.
ನಂತರ, ತಮ್ಮ ಕುಟುಂಬವು ಕೊಂಚ ಪರಿಹಾರವನ್ನು ಸ್ವೀಕರಿಸಿದೆ ಎಂದು ಸ್ಪಷ್ಟೀಕರಣ ನೀಡಿದ್ದ ಅಜಯ್ ಕುಮಾರ್ ಕುಟುಂಬವು, ತಮ್ಮ ಪುತ್ರನಿಗೆ ಹುತಾತ್ಮ ಗೌರವ ನೀಡಬೇಕು ಎಂದು ಆಗ್ರಹಿಸಿತ್ತು. “ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸಬೇಕು ಹಾಗೂ ನಾವು ಪಿಂಚಣಿ ಮತ್ತು ಕ್ಯಾಂಟೀನ್ ಕಾರ್ಡ್ ಸೌಲಭ್ಯವನ್ನು ಪಡೆಯಬೇಕು” ಎಂದು ಅಜಯ್ ಕುಮಾರ್ ತಂದೆ ಒತ್ತಾಯಿಸಿದ್ದರು.
ಸಶಸ್ತ್ರ ಪಡೆಗಳ ಕಿರು ಅವಧಿಯ ಸೇವೆಗೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಹಾಗೂ ಗಡಿಯಲ್ಲಿ ಕಾರ್ಯನಿರ್ವಹಿಸುವ ಯೋಧರ ವಯೋಮಾನವನ್ನು ಕಡಿತಗೊಳಿಸುವ ಉದ್ದೇಶದೊಂದಿಗೆ 2022ರಲ್ಲಿ ಅಗ್ನಿಪಥ್ ಯೋಜನೆ ಜಾರಿಗೆ ಬಂದಿತ್ತು. ಈ ಯೋಜನೆಗೆ ಸೇರ್ಪಡೆಯಾಗುವ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತಿದ್ದು, ಇಂತಹ ಅಗ್ನಿವೀರರು ಒಂದು ವೇಳೆ ಕರ್ತವ್ಯನಿರತರಾಗಿದ್ದಾಗ ಮೃತಪಟ್ಟರೆ ಚಾಲ್ತಿಯಲ್ಲಿರುವ ಪಿಂಚಣಿ ಸೌಲಭ್ಯದಂಥ ನಿಯಮಿತ ಸವಲತ್ತುಗಳನ್ನು ಅವರ ಕುಟುಂಬಗಳು ಪಡೆಯಲು ಅರ್ಹವಾಗುವುದಿಲ್ಲ.