ಸೋನಮ್ ವಾಂಗ್ಚುಕ್ ಬಂಧನ ಸ್ವೀಕಾರಾರ್ಹವಲ್ಲ : ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ಧಾಳಿ
ರಾಹುಲ್ ಗಾಂಧಿ | ಸೋನಮ್ ವಾಂಗ್ಚುಕ್
ಹೊಸದಿಲ್ಲಿ: ಲಡಾಖ್ ಗೆ ಆರನೇ ಶೆಡ್ಯೂಲ್ ನಡಿ ಸ್ಥಾನಮಾನ ನೀಡುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಗೆ ಪಾದಯಾತ್ರೆ ನಡೆಸುತ್ತಿದ್ದ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಸೇರಿದಂತೆ ಇತರರ ಬಂಧನ ಸ್ವೀಕಾರಾರ್ಹವಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿಗೆ ಪಾದಯಾತ್ರೆ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಮತ್ತು ಇತರರು ರಾತ್ರಿ ಸಿಂಘು ಗಡಿಯಲ್ಲಿ ವಾಸ್ತವ್ಯವಿರಲು ಬಯಸಿದ್ದರು. ದೆಹಲಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದರಿಂದ ಅವರನ್ನು ಗಡಿಯಿಂದ ವಾಪಾಸ್ಸು ತೆರಳುವಂತೆ ಸೂಚಿಸಲಾಗಿದೆ. ಆದರೆ ಅವರು ಸಮ್ಮತಿಸದಿದ್ದಾಗ ಗಡಿಯಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ವಾಂಗ್ಚುಕ್ ಸೇರಿದಂತೆ 120 ಜನರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಜೀ, ರೈತರ ಪ್ರತಿಭಟನೆಯಂತೆ ಈ ಚಕ್ರವ್ಯೂಹವೂ ಮುರಿಯಲಿದೆ, ನಿಮ್ಮ ಅಹಂಕಾರವೂ ಕೊನೆಯಾಗಲಿದೆ. ನೀವು ಲಡಾಖ್ ನ ಧ್ವನಿಯನ್ನು ಕೇಳಬೇಕು. ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿರುವ ಹಿರಿಯ ನಾಗರಿಕರ ಬಂಧನದ ಕ್ರಮವು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಸೋನಮ್ ವಾಂಗ್ಚುಕ್ ಸೇರಿದಂತೆ ಇತರರನ್ನು ಬಂಧಿಸಿ ಸಿಂಘು ಗಡಿಯಲ್ಲಿರುವ ಅಲಿಪುರ ಮತ್ತು ಇತರ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ PTI ವರದಿ ಮಾಡಿದೆ.