ರಕ್ಷಣಾ ಸ್ಥಾಯಿ ಸಮಿತಿಗೆ ರಾಹುಲ್ ಗಾಂಧಿ ಮರುನೇಮಕ
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: ಲೋಕಸಭಾ ಸದಸ್ಯತ್ವದ ಅನರ್ಹತೆ ರದ್ದುಗೊಂಡ ಕೆಲವೇ ದಿನಗಳ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ರಕ್ಷಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಬುಧವಾರ ನಾಮಕರಣಗೊಳಿಸಲಾಗಿದೆ.
ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಕೂಡಾ ಸಮಿತಿಗೆ ನೇಮಕಗೊಂಡಿರುವುದಾಗಿ ಲೋಕಸಭಾ ಪ್ರಕಟಣೆ ತಿಳಿಸಿದೆ.
ನೂತನವಾಗಿ ಚುನಾಯಿತರಾದ ಆಮ್ ಆದ್ಮಿ ಪಕ್ಷದ ಲೋಕಸಭಾ ಸದಸ್ಯ ಸುಶೀಲ್ ಕುಮಾರ್ ರಿಂಕು ಅವರನ್ನು ಕೃಷಿ, ಪಶುಸಂಗೋಪನೆ ಹಾಗೂ ಆಹಾರ ಸಂಸ್ಕರಣೆ ಸಮಿತಿಯ ಸದಸ್ಯರನ್ನಾಗಿ ನಾಮಕರಣಗೊಳಿಸಲಾಗಿದೆ. ಇತ್ತೀಚೆಗೆ ಪಂಜಾಬ್ ನ ಜಲಂಧರ್ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ರಿಂಕು ಜಯಗಳಿಸಿದ್ದಾರೆ ಹಾಗೂ ಅವರು ಲೋಕಸಭೆಯಲ್ಲಿ ಆಮ್ ಆದ್ಮಿಪಕ್ಷದ ಏಕೈಕ ಸಂಸದರಾಗಿದ್ದಾರೆ.
ಈ ವರ್ಷದ ಮಾರ್ಚ್ ನಲ್ಲಿ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾದ ಎನ್ಸಿಪಿಯ ಫೈಝಲ್ ಪಿ.ಪಿ. ಮೊಹಮ್ಮದ್ ಅವರನ್ನು ಗ್ರಾಹಕ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆಯ ಸಮಿತಿಗೆ ನಾಮಕರಣಗೊಳಿಸಲಾಗಿದೆ.
ಮಾರ್ಚ್ ನಲ್ಲಿ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುವ ಮೊದಲು ರಾಹುಲ್ ಗಾಂಧಿ ಅವರು ರಕ್ಷಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು.
ಮೋದಿ ಉಪನಾಮದ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ ಪ್ರಕರಣದಲ್ಲಿ ರಾಹುಲ್ ತಪ್ಪಿತಸ್ಥರು ಎಂದು ಗುಜರಾತ್ ನ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅವರ ಲೋಕಸಭಾ ಸದಸ್ಯತ್ವ ರದ್ದುಗೊಂಡಿತ್ತು. ಆದರೆ ಆಗಸ್ಟ್ ನಲ್ಲಿ ಅವರ ವಿರುದ್ಧದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ಬಳಿಕ ಆಗಸ್ಟ್ 7ರಂದು ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾಗಿತ್ತು.