ಜಗತ್ತಿನ ಅತಿ ದೊಡ್ಡ ಸುಲಿಗೆ ಯೋಜನೆ ಎಂದು ಚುನಾವಣಾ ಬಾಂಡ್ ಯೋಜನೆ ಬಗ್ಗೆ ಕುಟುಕಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಘಾಝಿಯಾಬಾದ್ (ಉತ್ತರಪ್ರದೇಶ): ಚುನಾವಣಾ ಬಾಂಡ್ ಯೋಜನೆಯು ‘‘ಜಗತ್ತಿನ ಅತಿ ದೊಡ್ಡ ಸುಲಿಗೆ ಯೋಜನೆಯಾಗಿದೆ’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಬಣ್ಣಿಸಿದ್ದಾರೆ. ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ ತರಲು ತನ್ನ ಸರಕಾರವು ಈ ಯೋಜನೆಯನ್ನು ಜಾರಿಗೊಳಿಸಿತ್ತು ಎಂಬುದಾಗಿ ಸಂದರ್ಶನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಯನ್ನು ಅವರು ಹಾಸ್ಯ ಮಾಡಿದ್ದಾರೆ.
‘‘ಕೆಲವು ದಿನಗಳ ಹಿಂದೆ, ಪ್ರಧಾನಿಯವರು ಎಎನ್ಐ ಸುದ್ದಿ ಸಂಸ್ಥೆಗೆ ಸುದೀರ್ಘ ಸಂದರ್ಶನವೊಂದನ್ನು ನೀಡಿದರು. ಅದು ಮೊದಲೇ ಸಿದ್ಧಪಡಿಸಿಟ್ಟ ಸಂದರ್ಶನವಾಗಿತ್ತು. ಆದರೂ, ಅದು ವಿಫಲವಾಗಿದೆ’’ ಎಂದು ಉತ್ತರಪ್ರದೇಶದ ಘಾಝಿಯಾಬಾದ್ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದರು.
ಆ ಸಂದರ್ಶನದಲ್ಲಿ, ಮೋದಿ ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ವಿವರಣೆ ನೀಡಲು ಪ್ರಯತ್ನಿಸಿದರು ಎಂದು ಕಾಂಗ್ರೆಸ್ ನಾಯಕ ಹೇಳಿದರು. ‘‘ಪಾರದರ್ಶಕತೆಯನ್ನು ತರಲು ಮತ್ತು ರಾಜಕೀಯವನ್ನು ಶುದ್ಧಗೊಳಿಸಲು ಚುನಾವಣಾ ಬಾಂಡ್ ಗಳ ವ್ಯವಸ್ಥೆಯನ್ನು ತರಲಾಯಿತು ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ. ಇದು ನಿಜವೇ ಆಗಿದ್ದರೆ, ಆ ವ್ಯವಸ್ಥೆಯನ್ನು ಸುಪ್ರೀಂ ಕೋರ್ಟ್ ಯಾಕೆ ರದ್ದುಗೊಳಿಸಿತು?’’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಚುನಾವಣಾ ಬಾಂಡ್ ಗಳ ಉದ್ದೇಶ ಪಾರದರ್ಶಕತೆಯನ್ನು ಹೆಚ್ಚಿಸುವುದಾಗಿದ್ದರೆ, ಅವುಗಳ ಮೂಲಕ ಪಕ್ಷಕ್ಕೆ ದೇಣಿಗೆಗಳನ್ನು ನೀಡಿದವರ ಹೆಸರುಗಳನ್ನು ಬಿಜೆಪಿಯು ಯಾಕೆ ‘‘ಅಡಗಿಸಿಟ್ಟಿತ್ತು’’ ಎಂದು ಅವರು ಕೇಳಿದರು. ‘‘ಅವರು ನಿಮಗೆ ಯಾವಾಗ ಹಣ ಕೊಟ್ಟರು ಎನ್ನುವ ಮಾಹಿತಿಗಳನ್ನು ನೀವು ಯಾಕೆ ಅಡಗಿಸಿಟ್ಟಿರಿ?’’ ಎಂದು ಅವರು ಪ್ರಶ್ನಿಸಿದರು.
ಇಡೀ ಚುನಾವಣಾ ಬಾಂಡ್ ಯೋಜನೆಯು ಅತ್ಯಂತ ಗುಪ್ತವಾಗಿತ್ತು. ಈ ಬಡ್ಡಿ ರಹಿತ ಬಾಂಡ್ ಗಳನ್ನು ಖರೀದಿಸಿರುವುದನ್ನು ಖರೀದಿದಾರರು ಘೋಷಿಸಬೇಕಾಗಿರಲಿಲ್ಲ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ತೋರಿಸಬೇಕಾಗಿರಲಿಲ್ಲ. ಆದರೆ, ಈ ಎಲ್ಲಾ ಮಾಹಿತಿಗಳನ್ನು ಕೇಂದ್ರ ಸರಕಾರ ಸಂಗ್ರಹಿಸಬಹುದಾಗಿತ್ತು. ಯಾಕೆಂದರೆ ಬಾಂಡ್ ಗಳನ್ನು ಮಾರುವ ಮತ್ತು ನಗದೀಕರಿಸುವ ಕೆಲಸವನ್ನು ಕೇಂದ್ರ ಸರಕಾರದ ಒಡೆತನದ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ವಹಿಸಿಕೊಡಲಾಗಿತ್ತು. ಪ್ರತಿಪಕ್ಷಗಳು ಮತ್ತು ಜನರಿಗೆ ಈ ಯಾವುದೇ ಮಾಹಿತಿ ಲಭ್ಯವಿರಲಿಲ್ಲ.
ಈ ಯೋಜನೆ ಅಸಾಂವಿಧಾನಿಕ ಮತ್ತು ರಾಜಕೀಯ ಪಕ್ಷಗಳು ಮತ್ತು ದೇಣಿಗೆದಾರರ ನಡುವೆ ಕೊಡು-ಕೊಳ್ಳುವಿಕೆ ವ್ಯವಹಾರಕ್ಕೆ ಕಾರಣವಾಗಬಹುದು ಎಂದು ಹೇಳಿ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
‘ಇದನ್ನು ನಾವು ರಸ್ತೆ ಬದಿಯಲ್ಲಿ ಸುಲಿಗೆ ಎನ್ನುತ್ತೇವೆ’
‘‘ಕಂಪೆನಿಯೊಂದಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಮೊತ್ತದ ಗುತ್ತಿಗೆಗಳನ್ನು ನೀಡಲಾಗಿದೆ ಹಾಗೂ ತಕ್ಷಣ ಕಂಪೆನಿಯು ಬಿಜೆಪಿಗೆ ಹಣ ನೀಡುತ್ತದೆ’’ ಎಂದು ರಾಹುಲ್ ಗಾಂಧಿ ಹೇಳಿದರು. ‘‘ಕಂಪೆನಿಯೊಂದರ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ) ಮತ್ತು ಸಿಬಿಐ ತನಿಖೆ ಆರಂಭಿಸುತ್ತದೆ. 10-15 ದಿನಗಳಲ್ಲಿ ಆ ಕಂಪೆನಿಯು ಕೋಟಿಗಟ್ಟಲೆ ರೂಪಾಯಿ ಹಣವನ್ನು ಬಿಜೆಪಿಗೆ ನೀಡುತ್ತದೆ ಮತ್ತು ಆ ಕಂಪೆನಿ ವಿರುದ್ಧದ ಈಡಿ, ಸಿಬಿಐ ತನಿಖೆ ನಿಲ್ಲುತ್ತದೆ. ರಸ್ತೆ ಬದಿಯಲ್ಲಿ ನಾವು ಅದನ್ನು ಸುಲಿಗೆ ಎಂದು ಕರೆಯುತ್ತೇವೆ’’ ಎಂದರು.
‘‘ಭಾರತದ ಎಲ್ಲಾ ಉದ್ಯಮಿಗಳಿಗೆ ಇದು ಗೊತ್ತಿದೆ. ಪ್ರಧಾನಿ ಎಷ್ಟೇ ಸ್ಪಷ್ಟೀಕರಣ ನೀಡಿದರೂ ಅದರಿಂದ ಏನೂ ಪ್ರಯೋಜನವಿಲ್ಲ. ಯಾಕೆಂದರೆ, ಪ್ರಧಾನಿ ಮೋದಿ ಭ್ರಷ್ಟಾಚಾರದ ಪಿತಾಮಹ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ’’ ಎಂದು ರಾಹುಲ್ ಗಾಂಧಿ ನುಡಿದರು.