"ದೇಶದಲ್ಲಿ ಮೌನ ವಹಿಸಿ, ವಿದೇಶದಲ್ಲಿ ವೈಯಕ್ತಿಕ ವಿಷಯ ಎಂದು ಹೇಳ್ತಾರೆ": ಅದಾನಿ ಕುರಿತ ಮೋದಿ ಹೇಳಿಕೆಗೆ ರಾಹುಲ್ ಗಾಂಧಿ ಟೀಕೆ

ರಾಹುಲ್ ಗಾಂಧಿ
ಹೊಸದಿಲ್ಲಿ: ವಿದೇಶದಲ್ಲಿ ಗೌತಮ್ ಅದಾನಿ ವಿರುದ್ಧದ ದೋಷಾರೋಪಣೆಯನ್ನು ವೈಯಕ್ತಿಕ ವಿಷಯ ಎಂದು ಹೇಳುವ ಮೂಲಕ ಪ್ರಧಾನಿ ತನ್ನ ಸ್ನೇಹಿತನನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ಪ್ರಶ್ನೆಗಳನ್ನು ಕೇಳಿದರೆ ಮೌನ ವಹಿಸಿ, ವಿದೇಶದಲ್ಲಿ ವೈಯಕ್ತಿಕ ವಿಷಯ ಎಂದು ಹೇಳುತ್ತೀರಿ, ಅಮೆರಿಕದಲ್ಲಿಯೂ ಮೋದಿ ಅದಾನಿಯನ್ನು ಭ್ರಷ್ಟಾಚಾರದ ಆರೋಪಗಳಿಂದ ರಕ್ಷಿಸಿದ್ದಾರೆ. ಮೋದಿಜಿಗೆ, ಸ್ನೇಹಿತರ ಜೇಬು ತುಂಬುವುದು ರಾಷ್ಟ್ರ ನಿರ್ಮಾಣದ ಕಾರ್ಯ, ಲಂಚ ಮತ್ತು ರಾಷ್ಟ್ರದ ಆಸ್ತಿಗಳನ್ನು ಲೂಟಿ ಮಾಡುವುದು ‘ವೈಯಕ್ತಿಕ ವಿಷಯ’ ಎಂದು ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶ್ವೇತ ಭವನದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದರು. ಬಿಲಿಯನೇರ್ ಗೌತಮ್ ಅದಾನಿ ವಿರುದ್ಧ ಅಮೆರಿಕ ಸರಕಾರ ಹೊರಿಸಿರುವ ಲಂಚದ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ಮೊದಲನೆಯದಾಗಿ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಮತ್ತು ನಮ್ಮ ಸಂಸ್ಕೃತಿ ಮತ್ತು ನಮ್ಮ ಚಿಂತನೆಯ ತತ್ವವೆಂದರೆ, 'ವಸುಧೈವ ಕುಟುಂಬಕಂ', ಅಂದರೆ ಮೂಲತಃ ಇಡೀ ಜಗತ್ತೇ ಒಂದು ಕುಟುಂಬ. ಅದಾನಿ ವಿರುದ್ಧದ ಆರೋಪಗಳು ವೈಯಕ್ತಿಕ ವಿಷಯ ಮತ್ತು ಅಂತಹ ವೈಯಕ್ತಿಕ ವಿಷಯವನ್ನು ಟ್ರಂಪ್ ಜೊತೆಗಿನ ಚರ್ಚೆಯ ವೇಳೆ ಪ್ರಸ್ತಾಪಿಸಿಲ್ಲ ಎಂದು ಹೇಳಿದ್ದರು.