ಸ್ಕೂಟರ್ ನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ
ಐಝ್ವಾಲ್ ನ ಸಂಚಾರಿ ಶಿಸ್ತಿಗೆ ಮೆಚ್ಚುಗೆ
Photo Credit: X/@INCIndia
ಐಝ್ವಾಲ್: ಚುನಾವಣಾ ರಾಜ್ಯವಾದ ಮಿಜೋರಾಂಗೆ ಎರಡು ದಿನಗಳ ಭೇಟಿ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ, ಮಂಗಳವಾರ ಮಿಜೋರಾಂನ ರಾಜಧಾನಿ ಐಝ್ವಾಲ್ ನಲ್ಲಿ ಸ್ಕೂಟರ್ ಟ್ಯಾಕ್ಸಿ ಮೇಲೆ ಪ್ರಯಾಣಿಸಿ, ಅಲ್ಲಿನ ಬಹು ಚರ್ಚಿತ ಸಂಚಾರಿ ಶಿಸ್ತನ್ನು ಶ್ಲಾಘಿಸಿದರು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ, ಖರ್ಕ್ವಾತ್ ಪ್ರದೇಶದಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಲಾಲ್ ತನ್ಹ್ವಾಲ ಅವರ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು.
ಲಾಲ್ ತನ್ಹ್ವಾಲ ನಿವಾಸದಿಂದ ಹಿಂದಿರುಗುವಾಗ ರಾಹುಲ್ ಗಾಂಧಿ ಸ್ಕೂಟರ್ ಟ್ಯಾಕ್ಸಿಯಲ್ಲಿ ಹಿಂಬದಿ ಸವಾರರಾಗಿ ಪ್ರಯಾಣಿಸಿದರು ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮದ ಮುಖ್ಯಸ್ಥ ಲಾಲ್ ರೆಮ್ರೌತಾ ರೆನ್ತ್ ಲೆಯಿ ತಿಳಿಸಿದ್ದಾರೆ.
ರಾಜ್ಯದ ಸಂಚಾರಿ ಶಿಸ್ತಿಗೆ ಸಾಕ್ಷಿಯಾದ ಬಗ್ಗೆ ಹರ್ಷ ವ್ಯಕ್ತಪಡಿಸಿದ ರಾಹುಲ್ ಗಾಂಧಿ, “ಒಬ್ಬರನ್ನೊಬ್ಬರು ಗೌರವಿಸುವ ಈ ಸಂಸ್ಕೃತಿಯಿಂದ ಕಲಿಯುವುದು ಸಾಕಷ್ಟಿದೆ” ಎಂದು ಶ್ಲಾಘಿಸಿದ್ದಾರೆ.
ಮಿಜೋರಾಂನ ಸಂಚಾರಿ ಶಿಸ್ತಿನ ಬಗ್ಗೆ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಒಳಗೊಂಡಂತೆ ಹಲವಾರು ಪ್ರಖ್ಯಾತ ವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂಚಾರಿ ಶಿಸ್ತು ಐಝ್ವಾಲ್ ಗೆ ‘ನಿಶ್ಯಬ್ದ ನಗರ’ ಅಥವಾ “ಸದ್ದಿಲ್ಲದ ನಗರ’ ಎಂಬ ಗರಿಮೆಯನ್ನು ತಂದಿತ್ತಿದೆ.