ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸುವಂತೆ ಸಿದ್ದರಾಮಯ್ಯಗೆ ಪತ್ರ ಬರೆದ ರಾಹುಲ್ ಗಾಂಧಿ

ರಾಹುಲ್ ಗಾಂಧಿ , ಸಿದ್ದರಾಮಯ್ಯ | PTI
ಹೊಸದಿಲ್ಲಿ: ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಯಲು ರಾಜ್ಯ ಸರಕಾರ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ ಸಿಎಂಗೆ ಬರೆದ ಪತ್ರದಲ್ಲಿ ಬಿಆರ್ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ ತಾರತಮ್ಯದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ʼಅಂಬೇಡ್ಕರ್ ಅವರು ಎತ್ತಿನಗಾಡಿ ಪ್ರಯಾಣದ ಸಂದರ್ಭದಲ್ಲಿ ಅನುಭವಿಸಿದ ಘಟನೆಯೊಂದನ್ನು ಅವರು ಪತ್ರದಲ್ಲಿ ವಿವರಿಸಿದ್ದಾರೆ. 'ನಮ್ಮೊಂದಿಗೆ ಸಾಕಷ್ಟು ಆಹಾರವಿತ್ತು. ನಾವು ಹಸಿವಿನಿಂದ ಬಳಲುತ್ತಿದ್ದೆವು. ಆದರೂ, ನಾವು ಆಹಾರವಿಲ್ಲದೆ ಮಲಗಿದ್ದೇವೆ, ಮತ್ತು ನಾವು ಅಸ್ಪೃಶ್ಯರಾಗಿದ್ದರಿಂದ ನಮಗೆ ನೀರು ಸಿಗಲಿಲ್ಲʼ ಎಂದು ಅಂಬೇಡ್ಕರ್ ಹೇಳಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಅಂಬೇಡ್ಕರ್ ಅವರು ಶಾಲೆಯಲ್ಲಿನ ತಮ್ಮ ಅನುಭವದ ಬಗ್ಗೆ ಹೇಳುತ್ತಾರೆ. ʼನಾನು ಅಸ್ಪೃಶ್ಯ ಎಂದು ನನಗೆ ತಿಳಿದಿತ್ತು, ಅಸ್ಪೃಶ್ಯರು ಕೆಲವು ಅವಮಾನಗಳು ಮತ್ತು ತಾರತಮ್ಯಗಳಿಗೆ ಒಳಗಾಗುತ್ತಾರೆ ಎಂದು ನನಗೆ ತಿಳಿದಿತ್ತು. ಉದಾಹರಣೆಗೆ, ಶಾಲೆಯಲ್ಲಿ ನನ್ನ ಶ್ರೇಣಿಗೆ ಅನುಗುಣವಾಗಿ ನನ್ನ ಸಹಪಾಠಿಗಳ ಮಧ್ಯೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿತ್ತು, ನಾನು ಒಂದು ಮೂಲೆಯಲ್ಲಿ ಕುಳಿತುಕೊಳ್ಳಬೇಕಿತ್ತುʼ ಎಂದು ಅಂಬೇಡ್ಕರ್ ಹೇಳಿದರು ಎಂಬ ವಿಚಾರವನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಂಬೇಡ್ಕರ್ ಎದುರಿಸಿದ್ದು ನಾಚಿಕೆಗೇಡಿನ ಸಂಗತಿ ಮತ್ತು ಭಾರತದಲ್ಲಿ ಯಾವುದೇ ಮಗು ಇದನ್ನು ಅನುಭವಿಸಬಾರದು ಎಂಬುದನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಇಂದಿಗೂ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯಗಳ ಲಕ್ಷಾಂತರ ವಿದ್ಯಾರ್ಥಿಗಳು ಇಂತಹ ಕ್ರೂರ ತಾರತಮ್ಯವನ್ನು ಎದುರಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಹುಲ್ ಗಾಂಧಿ ಹೇಳಿದರು.
ರೋಹಿತ್ ವೇಮುಲ, ಪಾಯಲ್ ತದ್ವಿ ಮತ್ತು ದರ್ಶನ್ ಸೋಲಂಕಿಯಂತಹ ಧೀಮಂತ ಯುವಕರ ಹತ್ಯೆಯನ್ನು ಒಪ್ಪಲಾಗದು. ಇದಕ್ಕೆ ಕಡಿವಾಣ ಹಾಕುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪತ್ರವನ್ನು ಹಂಚಿಕೊಂಡ ರಾಹುಲ್ ಗಾಂಧಿ, ಇತ್ತೀಚೆಗೆ, ನಾನು ಸಂಸತ್ತಿನಲ್ಲಿ ದಲಿತ, ಆದಿವಾಸಿ ಮತ್ತು OBC ಸಮುದಾಯಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಭೇಟಿ ಮಾಡಿದ್ದೇನೆ. ಸಂಭಾಷಣೆಯ ಸಮಯದಲ್ಲಿ, ಅವರು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಹೇಗೆ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು. ವಂಚಿತರು ಸಬಲರಾಗಲು ಮತ್ತು ಜಾತಿ ವ್ಯವಸ್ಥೆಯನ್ನು ಮುರಿಯಲು ಶಿಕ್ಷಣವೊಂದೇ ಮಾರ್ಗ ಎಂದು ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ. ಆದರೆ ದಶಕಗಳ ನಂತರವೂ ಲಕ್ಷಾಂತರ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯವನ್ನು ಎದುರಿಸುತ್ತಿರುವುದು ಅತ್ಯಂತ ವಿಷಾದನೀಯ ಎಂದು ಹೇಳಿದರು.