ಹಿರಿಯ ನಾಯಕರನ್ನು ನಿಯಂತ್ರಿಸಲು ವಿಫಲವಾದದ್ದೇ ಕಾಂಗ್ರೆಸ್ ಸೋಲಿಗೆ ಕಾರಣ!
ರಾಹುಲ್ ಗಾಂಧಿ
ಹೊಸದಿಲ್ಲಿ: ಚುನಾವಣೆ ನಡೆಯುವ ರಾಜ್ಯಗಳಲ್ಲಿ ಅನುಕೂಲಕರ ವಾತಾವರಣ ಇದ್ದರೂ, ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿದ ಬಗ್ಗೆ ವಿಶ್ಲೇಷಣೆಗಳು ಆರಂಭವಾಗಿವೆ.
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರದಲ್ಲಿ ಪ್ರಚಾರದ ಅಂತರವನ್ನು ಕಡೆಗಣಿಸಿದ್ದು ಮತ್ತು ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ಸಂಬಂಧಿ ಅಭಿಪ್ರಾಯಗಳನ್ನು ಪಡೆಯುವ ವೇಳೆ ಹಿರಿಯ ಮುಖಂಡರನ್ನು ನಿಯಂತ್ರಿಸಲು ಹೈಕಮಾಂಡ್ ವಿಫಲವಾಗಿದ್ದು, ಕೊನೆ ಹಂತದಲ್ಲಿ ಹಿನ್ನಡೆಗೆ ಕಾರಣವಾಯಿತು ಎಂದು timesofindia ವರದಿ ಮಾಡಿದೆ.
ಮಧ್ಯಪ್ರದೇಶದಲ್ಲಿ ಅಧಿಕಾರ ವಿರೋಧಿ ಅಲೆ ದಟ್ಟವಾಗಿ ಇರುವ ಹಿನ್ನೆಲೆಯಲ್ಲೇ ಬಿಜೆಪಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ತನ್ನ ಸಿಎಂ ಅಭ್ಯರ್ಥಿ ಎಂದು ಬಿಂಬಿಸಲೇ ಇಲ್ಲ. ಆದರೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕಮಲನಾಥ್ ಅವರು, ಇದರ ಪ್ರಯೋಜನ ಪಡೆಯುವ ಕಾರ್ಯತಂತ್ರ ರೂಪಿಸುವಲ್ಲಿ ವಿಫಲರಾದರು. ಸ್ಥಳೀಯವಾಗಿ ತೀವ್ರ ಪ್ರಚಾರಕ್ಕೆ ಒತ್ತು ನೀಡದ ಅವರು, ಸರ್ಕಾರದ ಮೇಲಿದ್ದ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಸಿಎಂ ಬಗೆಗಿನ ವಿರೋಧ ತಮ್ಮ ಪಕ್ಷಕ್ಕೆ ವರದಾನವಾಗುತ್ತದೆ ಎಂಬ ಅತಿಯಾದ ವಿಶ್ವಾಸ ಹೊಂದಿದ್ದರು. ಕೇಂದ್ರ ನಾಯಕರ ಸೂಚನೆಯ ಮೇರೆಗೆ ಸೆಪ್ಟೆಂಬರ್ ನಲ್ಲಿ ಏಳು ಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದ ʼಜನ ಆಕ್ರೋಶ ಯಾತ್ರೆʼಗೂ ಕಮಲನಾಥ್ ಒಲವು ಹೊಂದಿರಲಿಲ್ಲ ಎಂದು ಹೇಳಲಾಗುತ್ತಿದೆ.
ಕಮಲ್ ನಾಥ್ ಜತೆಗೆ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಹಾಗೂ ಜೆ.ಪಿ.ಅಗರ್ವಾಲ್ ಅವರು ಮಧ್ಯಪ್ರದೇಶ ಚುನಾವಣೆಯ ಎಐಸಿಸಿ ಉಸ್ತುವಾರಿ ಹೊಣೆಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಣದೀಪ್ ಸುರ್ಜೇವಾಲಾ ಅವರನ್ನು ಕೊನೆಕ್ಷಣದಲ್ಲಿ ನಿಯೋಜಿಸಲಾಗಿತ್ತು.
ಚುನಾವಣಾ ತಂತ್ರಗಾರ ಸುನೀಲ್ ಕನೊಗುಲು ಅವರು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಒಪ್ಪಿಕೊಳ್ಳದ ಕಮಲನಾಥ್ ತಮ್ಮದೇ ಏಜೆನ್ಸಿಗಳ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದು, ಈ ಹಂತದಲ್ಲಿ ರಾಹುಲ್ ಗಾಂಧಿಯವರು ಅವಕಾಶ ನೀಡಬಾರದಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಚುನಾವಣೆಗೆ ಸಂಬಂಧಿಸಿದ ಅಭಿಪ್ರಾಯಗಳು ಕೂಡಾ ತಪ್ಪುದಾರಿಗೆ ಎಳೆಯುವಂಥವು ಹಾಗೂ ಕೇಂದ್ರ ನಾಯಕತ್ವ ಕೂಡಾ ಇದನ್ನು ನಂಬಿದ್ದು, ಪಕ್ಷಕ್ಕೆ ಮುಳುವಾಯಿತು.