ಮೋದಿ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ; ನಾಚಿಕೆಗೇಡು, ಆಧಾರರಹಿತ ಎಂದು ವಾಗ್ದಾಳಿ ನಡೆಸಿದ ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ , ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆಯೆ ಹೊರತು, ಹಿಂದುಳಿದ ವರ್ಗಗಳಿಗೆ ಸೇರಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ ಎಂದು indiatoday.in ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಪಕ್ಚದ ಹಿರಿಯ ನಾಯಕ ರವಿಶಂಕರ್ ಪ್ರಸಾದ್, "ರಾಹುಲ್ ಗಾಂಧಿಯ ಮಟ್ಟ ಹೀಗಾಯಿತೆ? ಬಡ ಜನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು ನರೇಂದ್ರ ಮೋದಿಯನ್ನು ತಮ್ಮ ನಾಯಕ ಎಂದು ಪರಿಗಣಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭವಿಷ್ಯ ಕತ್ತಲೆಯಲ್ಲಿದೆ. ರಾಹುಲ್ ಗಾಂಧಿ ಇಂತಹ ನಾಚಿಕೆಗೇಡು, ಆಧಾರ ರಹಿತ ಹೇಳಿಕೆಗಳನ್ನು ನೀಡುವುದನ್ನು ಸ್ಥಗಿತಗೊಳಿಸಬೇಕು" ಎಂದು ಕಿಡಿ ಕಾರಿದ್ದಾರೆ.
ಗುರುವಾರ ಒಡಿಶಾದ ಝರ್ಸುಗುಡಾದಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ತಮ್ನ ಜಾತಿಯ ಕುರಿತು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದರು.
"ಪ್ರಧಾನಿ ಮೋದಿ ಹಿಂದುಳಿದ ವರ್ಗದ ಜಾತಿಯಲ್ಲಿ ಜನಿಸಿಲ್ಲ. ಬದಲಿಗೆ, ಅವರು ಗುಜರಾತ್ನ ತೇಲಿ ಜಾತಿಯಲ್ಲಿ ಜನಿಸಿದ್ದಾರೆ. ಆ ಸಮುದಾಯಕ್ಕೆ 2000ದಲ್ಲಿ ಹಿಂದುಳಿದ ವರ್ಗಗಳ ಮಾನ್ಯತೆಯನ್ನು ನೀಡಲಾಯಿತು. ಅವರು ಸಾಮಾನ್ಯ ಪ್ರವರ್ಗದ ಜಾತಿಯಲ್ಲಿ ಜನಿಸಿದ್ದಾರೆ" ಎಂದು ಅವರು ಆರೋಪಿಸಿದ್ದರು.
ಆದರೆ, ರಾಹುಲ್ ಗಾಂಧಿ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿ ಆಗುವುದಕ್ಕೂ ಎರಡು ವರ್ಷಗಳ ಮುನ್ನವೇ ತೇಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಮಾನ್ಯತೆಯನ್ನು ನೀಡಲಾಗಿತ್ತು ಎಂದು ಹೇಳಿದೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿಯ ಹೇಳಿಕೆಯನ್ನು ಉಲ್ಲೇಖಿಸಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ, "ಇದು ಅಪ್ಪಟ ಸುಳ್ಳು. ಪ್ರಧಾನಿ ಮೋದಿಯವರ ಜಾತಿಯನ್ನು ಅಕ್ಟೋಬರ್ 27, 1999ರಲ್ಲಿ ಹಿಂದುಳಿದ ವರ್ಗಗಳ ಜಾತಿ ಎಂದು ಅಧಿಸೂಚನೆ ಹೊರಡಿಸಲಾಯಿತು. ಇದು ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗುವುದಕ್ಕೂ ಎರಡು ವರ್ಷಗಳ ಹಿಂದೆ ನಡೆದಿತ್ತು. ಜವಾಹರಲಾಲ್ ನೆಹರೂವಿನಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಇಡೀ ಗಾಂಧಿ ಕುಟುಂಬವು ಹಿಂದುಳಿದ ವರ್ಗಗಳ ವಿರುದ್ಧವಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
1999ರಲ್ಲಿ 'ಮೋಧ್ ಘಾಂಚಿ' ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪ್ರವರ್ಗಕ್ಕೆ ಸೇರ್ಪಡೆ ಮಾಡಿರುವ ಅಧಿಸೂಚನೆಯ ಪ್ರತಿಯನ್ನೂ ಮಾಳವಿಯ ಹಂಚಿಕೊಂಡಿದ್ದಾರೆ.