ಸ್ಪೀಕರ್ರನ್ನು ಭೇಟಿಯಾದ ರಾಹುಲ್; ತನ್ನ ವಿರುದ್ಧ ಬಿಜೆಪಿ ಸಂಸದರ ಟೀಕೆಗಳಿಗೆ ಆಕ್ಷೇಪ
ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಸ್ಪೀಕರ್ ಓಂಬಿರ್ಲಾ ಅವರನ್ನು ಭೇಟಿಯಾಗಿ, ತನ್ನ ವಿರುದ್ಧ ಸದನದಲ್ಲಿ ಬಿಜೆಪಿ ಸದಸ್ಯರು ಮಾಡಿರುವ ಕೆಲವು ಆಕ್ಷೇಪಕಾರಿ ಟೀಕೆಗಳನ್ನು ಕಲಾಪಗಳ ಕಡತದಿಂದ ತೆಗೆದುಹಾಕುವಂತೆ ಆಗ್ರಹಿಸಿದರು ಹಾಗೂ ಸದನದ ಕಲಾಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸುವಂತೆ ಕೋರಿದರು.
ಆದಾವಿ ವಿವಾದದಿಂದ ದೇಶದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯು ತನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ರಾಹುಲ್ ಆಪಾದಿಸಿದರು. ಆದರೆ ತಾನು ಇಂತಹ ಆರೋಪಗಳಿಂದ ವಿಚಲಿತನಾಗುವುದಿಲ್ಲವೆಂದು ಅವರು ಹೇಳಿದ್ದಾರೆ.
ಡಿಸೆಂಬರ್ 13ರಿಂದ ಮೊದಲ್ಗೊಂಡು ಲೋಕಸಭೆಯಲ್ಲಿ ತಾನು ಹಾಗೂ ತನ್ನ ಪಕ್ಷವು ಸಂವಿಧಾನದ ಬಗ್ಗೆ ಚರ್ಚಿಸಲು ಬಯಸಿರುವುದಾಗಿ ಹೇಳಿದರು ಮತ್ತು ತನ್ನ ಜವಾಬ್ದಾರಿಯಲ್ಲದಿದ್ದರೂ ಸದನದ ಕಲಾಪಗಳು ಸಮರ್ಪಕವಾಗಿ ನಡೆಯುವುದನ್ನು ಖಾತರಿಪಡಿಸುವುದಾಗಿ ತಿಳಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್, ‘‘ ನಾನು ಲೋಕಸಭಾ ಸ್ಪೀಕರ್ ಅವರನ್ನು ಭೇಟಿಯಾಗಿ, ನನ್ನ ವಿರುದ್ಧ ಸದನದಲ್ಲಿ ಮಾಡಲಾದ ಮಾನಹಾನಿಕರ ಹೇಳಿಕೆಗಳನ್ನು ಕಾಪದ ಕಡತದಿಂದ ಕೈಬಿಡಬೇಕೆಂದು ಕೋರಿದ್ದೇನೆ. ಆ ಬಗ್ಗೆ ಪರಿಶೀಲಿಸುವುದಾಗಿ ಸ್ಪೀಕರ್ ಅರು ಭರವಸೆ ನೀಡಿದ್ದಾರೆ’’ ಎಂದು ಹೇಳಿದರು.
ಬಿಜೆಪಿಯು ಎಲ್ಲಾ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಆದರೆ ನಾವು ಸದನವು ಸುಸೂತ್ರವಾಗಿ ಕಾರ್ಯನಿರ್ವಹಿಸಬೇಕೆಂದು ಬಯಸುತ್ತೇವೆ. ಡಿಸೆಂಬರ್ 13ರಂದು ಸಂವಿಧಾನದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಬೇಕೆಂದು ನಾವು ಆಗ್ರಹಿಸುತ್ತೇವೆ ಎಂದವರು ಹೇಳಿದರು.
ಇದಕ್ಕೂ ಮುನ್ನ ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪನಾಯಕ ಗೌರವ್ ಗೊಗೊಯಿ ಅವರು ಸ್ಪೀಕರ್ ಓಂಬಿರ್ಲಾ ಅವರಿಗೆ ಪತ್ರಬರೆದು, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ದುಬೆ ಅವರು ಮಾಡಿರುವ ಮಾಹಾನಿಕರ ಆರೋಪಗಳನ್ನು ಲೋಕಸಭೆಯ ಕಲಾಪಗಳ ಕಡತದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದ್ದರು.